ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ

dj hyr minister
Published on

ಹಿರಿಯೂರು: ಸಾಮಾಜಿಕ ನ್ಯಾಯ, ಸರ್ವ ಸ್ಪರ್ಶಿ ಆಡಳಿತಕ್ಕೆ ರಾಜ್ಯ ಸರ್ಕಾರ ದೃಢ ಸಂಕಲ್ಪ ಮಾಡಿದೆ ಎಂದು ಜಿಲ್ಲಾ ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕಿನ ಧರ್ಮಪುರ-ಖಂಡೇನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಾಮಾಜಿಕವಾಗಿ ಶೋಷಣೆಗೊಳಾಗದ ಪ್ರತಿ ಜಾತಿಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದೆ ಎಂದರು.

ಶೈಕ್ಷಣಿಕ-ಆರ್ಥಿಕವಾಗಿ ತುಳಿತಕ್ಕೊಳಗಾದವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆ ಯಶಸ್ಸು ಸರ್ಕಾರಕ್ಕೆ ಆನೆ ಬಲ ತಂದಿದೆ, ಜನ ಸಾಮಾನ್ಯರ ಪ್ರೀತಿ, ವಿಶ್ವಾಸ ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ, ಮುಂಬರುವ ಜಿಪಂ, ತಾಪಂ ಚುನಾವಣೆ ಗೆಲುವಿಗೆ ಕಾರ್ಯಕರ್ತರು ಸಜ್ಜಾಗಬೇಕಿದೆ ಎಂದು ತಿಳಿಸಿದರು.

ಪಕ್ಷ ನಿಷ್ಠೆ, ಬದ್ಧತೆ ಇದ್ದವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನಿಶ್ಚಿತ, ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಗೌರವಿಸಲಾಗುವುದು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಧರ್ಮಪುರ ಏತ ನೀರಾವರಿ ಯೋಜನೆ 2 ನೇ ಹಂತದ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು, ನೀರಾವರಿ ಇಲಾಖೆ ಅಧಿಕಾರಿಗಳು ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಳಿಸಿ, ಡಿಪಿಆರ್ ಸಿದ್ಧಪಡಿಡುವ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರದಿಂದ ಅಗತ್ಯ ಅನುದಾನ ಮೀಸಲಿಟ್ಟು, ಕಾಲಮಿತಿಯಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ದಲಿತ-ಅಲ್ಪಸಂಖ್ಯಾತರ ಕಾಲನಿಗಳಲ್ಲಿ ವಸತಿ, ಚರಂಡಿ, ಕುಡಿವ ನೀರು ಸೇರಿ ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕೆ ನೆರವಾಗಲು ಮುಖ್ಯಮಂತ್ರಿ ತಾಲೂಕಿಗೆ ವಸತಿ ಶಾಲೆ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಈಶ್ವರಪ್ಪ, ಉಪಾಧ್ಯಕ್ಷ ಕೆ.ಟಿ.ಶ್ರೀನಿವಾಸ್, ಸದಸ್ಯರಾದ ಮಂಗಳಾ ಯೋಗೇಶ್, ಬಸವರಾಜ್, ರಘುನಾಥ್, ರಾಘವೇಂದ್ರ, ಶಿವಮ್ಮ, ಜಿಪಂ ಕೆಡಿಪಿ ಸದಸ್ಯ ತಿಮ್ಮಣ್ಣ, ಮುಖಂಡರಾದ ಜಿಯಾವುಲ್ಲಾ, ವೆಂಕಟೇಶ್, ನರಸಿಂಹಮೂರ್ತಿ, ಎಸ್.ಕೆ.ಶಿವಮೂರ್ತಿ, ದಾಸರಿ, ನಗರಸಭೆ ಸದಸ್ಯ ಈರಲಿಂಗೇಗೌಡ, ಅರ್ಚಕ ಮನು, ಕೆಂಪಣ್ಣ, ಮಂಜುನಾಥ್, ಚಿದಾನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net