ಸಂಪುಟದಿಂದ ಸಚಿವ ಡಿ. ಸುಧಾಕರ ಕೈಬಿಡಲು ಆಗ್ರಹ

17sdp5 MANAVI
Published on

ಸಿದ್ದಾಪುರ: ತಾಲೂಕು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಸಚಿವ ಡಿ. ಸುಧಾಕರ ಅವರನ್ನು ಮಂತ್ರಿಮಂಡಲದಿಂದ ಕೈಬಿಡುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರದ ಯೋಜನೆ ಹಾಗೂ ಸಾಂಸ್ಕೃತಿಕ ಸಚಿವ ಡಿ. ಸುಧಾಕರ ಅವರು ಯಾವುದೋ ಜಮೀನು ವ್ಯವಹಾರದ ಮಾತುಕತೆ ಸಂದರ್ಭದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿ ದುರಹಂಕಾರದ ಮಾತುಗಳನ್ನು ಆಡಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ರೀತಿಯ ಅವಹೇಳನಕಾರಿ ಹೇಳಿಕೆ ಹಾಗೂ ಬೇಜವಾಬ್ದಾರಿ ವರ್ತನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸುತ್ತದೆ. ಪ್ರತಿಜ್ಞಾವಿಧಿಯ ಸಂದರ್ಭದಲ್ಲಿ ಅವರು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವುದಾಗಿ, ರಾಜ್ಯದ ಮಂತ್ರಿಯಾಗಿ ನಿಷ್ಠೆಯಿಂದ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದ್ದರು. ಸಂವಿಧಾನ ಮತ್ತು ಕಾನೂನಿನ ಪ್ರಕಾರ ಸಮಸ್ತ ನಾಗರಿಕರನ್ನು ಸಮಾನವಾಗಿ ಕಾಣುವುದಾಗಿ, ಯಾವುದೇ ದ್ವೇಷಭಾವನೆಯಿಲ್ಲದೆ ಕಾರ್ಯನಿರ್ವಹಿಸುವುದಾಗಿ ಘೊಷಿಸಿಕೊಂಡಿದ್ದರು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕೆಲ ಸಮುದಾಯದ ಮೇಲೆ ಅವರು ದ್ವೇಷ ಹೊಂದಿರುವುದು ಅವರ ಮಾತಿನಿಂದ ಸ್ಪಷ್ಟವಾಗುತ್ತದೆ.

ಇಂತಹ ಸಚಿವರು ಸಂಪುಟದಲ್ಲಿ ಮುಂದುವರಿಯಲು ಅರ್ಹರಲ್ಲ. ಜಾತಿ ನಿಂದನೆ ಮಾಡಿರುವ ಇವರನ್ನು ಈ ಕೂಡಲೆ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸುತ್ತೇವೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಆರ್.ಎಸ್.ಭಟ್ಟ ಸ್ವಸ್ತಿಕ್, ಮಹೇಶ ಭಟ್ಟ ಚಟ್ನಳ್ಳಿ, ಅನಂತ ಭಟ್ಟ ಗಾಳಿಮನೆ, ರಮೇಶ ಹೆಗಡೆ ಕೊಡ್ತಗಣಿ, ಜನಾರ್ದನ ಹೆಗಡೆ ಹುಲಿಮನೆ, ರಾಮಮೂರ್ತಿ ಹೆಗಡೆ ಕನ್ನಳ್ಳಿ, ಅರವಿಂದ ಶರ್ಮಾ ಕಲ್ಲಾಳ, ಮಂಜುನಾಥ ಹೆಗಡೆ ನೇರ್ಲಮನೆ, ಗಣಪತಿ ಹೆಗಡೆ ಕೊಳಗಿ, ಚಂದನ ಶಾಸ್ತ್ರಿ ಮಗೇಗಾರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net