

ಚಿಕ್ಕಮಗಳೂರು: ಆಧುನಿಕ ಕಾಲದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಶಿಕ್ಷಣ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಬಸವನಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಪಂ, ಶಿಕ್ಷಣ ಇಲಾಖೆ ಹಾಗೂ ಭಾರತ ಪೆಟ್ರೋಲಿಯಂ ಕಾಪೋರೇಷನ್ ಸಹಯೋಗದ ಸ್ಮಾರ್ಟ್ ಕ್ಲಾಸ್ ಲ್ಯಾಬ್ನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ 14 ಸರ್ಕಾರಿ ಪ್ರೌಢಶಾಲೆಗಳಲ್ಲಿ 34 ಲಕ್ಷ ರೂ. ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ಗಳನ್ನು ಅಳವಡಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಶಿಕ್ಷಣ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಸ್ಮಾರ್ಟ್ ಯುಗದಲ್ಲಿ ತಂತ್ರಜ್ಞಾನ ಶಿಕ್ಷಣದ ಅವಶ್ಯಕತೆ ಇದ್ದು, ವಿದ್ಯಾರ್ಥಿಗಳಲ್ಲಿ ಕಲಿಕೆ ಆಸಕ್ತಿ ಇಮ್ಮಡಿಗೊಳಿಸಲು ಸ್ಮಾರ್ಟ್ ಕ್ಲಾಸ್ ಬಹುಮುಖ್ಯ ಪಾತ್ರವಹಿಸುತ್ತದೆ ಎಂದರು.
ಸ್ಮಾರ್ಟ್ ಕ್ಲಾಸ್ ಲ್ಯಾಬ್ಗಳು ಮೂಲೆಗುಂಪಾಗದೆ ಶಿಕ್ಷಕರು ಇದರ ತರಬೇತಿ ಪಡೆದು ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸಬೇಕು. ಇದರ ಮೂಲಕ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ನೀಡಿ ಮಾದರಿ ಶಾಲೆಯಾಗಿ ಪರಿವರ್ತಿಸಬೇಕು ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಕಂಪ್ಯೂಟರ್ ಯುಗದಲ್ಲಿ ಸ್ಮಾರ್ಟ್ ಕ್ಲಾಸ್ಗಳ ಅಗತ್ಯ ಹೆಚ್ಚಿದ್ದು, ಮಕ್ಕಳ ಕಲಿಕೆಗೆ ಸುಲಭ ಮಾರ್ಗವಾಗಿದೆ ಎಂದು ಹೇಳಿದರು.
ಭಾರತ ಪೆಟ್ರೋಲಿಯಂ ಕಾಪೋರೇಷನ್ ವ್ಯವಸ್ಥಾಪಕ ಸಚಿನ್ ಕುಲಕರ್ಣಿ, ಮಕ್ಕಳು ಓದಿ ಕಲಿಯುವುದಕ್ಕಿಂತ ನೋಡಿ ಕಲಿಯುವುದಕ್ಕೆ ಹೆಚ್ಚು ಆಸಕ್ತಿ ತೋರುತ್ತಾರೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ಗಳು ಉಪಯುಕ್ತವಾಗಿವೆ ಎಂದು ಹೇಳಿದರು.
ಜಿಪಂ ಉಪಾಧ್ಯಕ್ಷ ಜಿ.ಎನ್.ವಿಜಯಕುಮಾರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್, ಡಿಡಿಪಿಐ ಜಯಣ್ಣ, ಬಿಇಒ ಮಂಜುನಾಥ್, ಬಸವನಹಳ್ಳಿ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಎಸ್ಡಿಎಂಸಿ ನಾಗರತ್ನಾ ಇದ್ದರು.