

ಚಿಕ್ಕಮಗಳೂರು: ದುಬೈನಲ್ಲಿ 4 ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದು ಬೆಂಗಳೂರು ಹಾಗೂ ಮಂಗಳೂರಿಗೆ ಬರಲು ಆಸಕ್ತಿ ತೋರಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಅವರೊಂದಿಗೆ ಮಾತುಕತೆ ನಡೆಸಿ ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಗೃಹ ಕಚೇರಿಯಲ್ಲಿ ಅರಬ್ ರಾಷ್ಟ್ರದಲ್ಲಿ ನೆಲೆಸಿರುವ ದುಬೈ ಕನ್ನಡ ಸಂಘದ 25 ಕನ್ನಡಿಗರೊಂದಿಗೆ ಶನಿವಾರ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
ಹೊರನಾಡು, ಗಡಿನಾಡು ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರಬ್ ರಾಷ್ಟ್ರಗಳಲ್ಲಿರುವ ಕನ್ನಡಿಗರಿಗೂ ನೀಡಬೇಕೆಂಬ ಮನವಿ ಬಂದಿದೆ. ಆದರೆ ಈ ಬಗ್ಗೆ ಸರ್ಕಾರದ ನಿಯಮಗಳಂತೆ ನಡೆದುಕೊಳ್ಳಬೇಕಿದೆ. ವಿದೇಶಿ ನೆಲದಲ್ಲಿ ಕರ್ನಾಟಕ ದರ್ಶನಗಳ ರೋಡ್ಶೋ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ವಿದೇಶಿ ಕನ್ನಡಿಗರ ಮಕ್ಕಳನ್ನು ಇಲ್ಲಿನ ಶಾಲೆಗಳಲ್ಲಿ ಸಹಾಯವಾಣಿ ಸ್ಥಾಪಿಸಿ ಅಂಕಪಟ್ಟಿ ಅಥವಾ ಶಾಲಾ ದಾಖಲಾತಿ ಆಧಾರದಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು. ರಜಾ ದಿನಗಳಲ್ಲಿ ಆನ್ಲೈನ್ ವರ್ಕ್ಶಾಪ್ ಆಯೋಜಿಸುವಂತೆ ಕೇಳಿಕೊಂಡಿದ್ದು ಇಲ್ಲಿನ ಮಾನವ ಸಂಪನ್ಮೂಲ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂವಾದದಲ್ಲಿ ವಿದೇಶಿ ಕನ್ನಡಿಗರ ಅಹವಾಲುಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.