ಅಗತ್ಯ ಬಿದ್ದರೆ ಬೆಂಗಳೂರು ಗಲಭೆ ಸಿಬಿಐ ತನಿಖೆಗೆ

web 1
Published on

ಬಾಳೆಹೊನ್ನೂರು: ಬೆಂಗಳೂರು ಗಲಭೆ ಹಿಂದೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕೈವಾಡವಿರುವುದು ಮೇಲ್ನೋಟಕ್ಕೆ ಮಾಹಿತಿ ದೊರೆತರೆ ಸಿಬಿಐಗೆ ವಹಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 300ಕ್ಕೂ ಅಧಿಕ ಜನರ ಬಂಧನವಾಗಿದೆ. ಸಮಾಜಘಾತಕ ಶಕ್ತಿಗಳ ಜತೆಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರೊಂದಿಗೆ ರಾಜಕಾರಣ ಮಾಡುವ ಪಕ್ಷವೂ ನಮ್ಮದಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ದೊಂಬಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ಕೊಟ್ಟವರ ಬಗ್ಗೆ, ಮಾರಕಾಸ್ತ್ರ, ಪೆಟ್ರೋಲ್ ಸಂಗ್ರಹಣೆ, ಹಣದ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ನೈಜ ಘಟನೆಯನ್ನು ಜನರ ಮುಂದಿಡಲಾಗುವುದು ಎಂದು ಹೇಳಿದರು.

ಕಾಪೋರೇಟರ್​ಗಳಿಗೆ ಸುಮ್ಮನೆ ನೋಟಿಸ್ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುಮ್ಮನೆ ನೋಟಿಸ್ ನೀಡಲು ನಾವು ಕೆಲಸವಿಲ್ಲದೆ ಕುಳಿತಿಲ್ಲ. 300ಕ್ಕೂ ಹೆಚ್ಚು ವಾಹನಗಳು ಭಸ್ಮವಾಗಿವೆ. ಪೊಲೀಸ್ ಠಾಣೆ ಸುಟ್ಟಿದ್ದಾರೆ. ಅವರದ್ದೇ ಪಕ್ಷದ ಶಾಸಕನ ಮನೆ ಭಸ್ಮವಾಗಿದೆ. ತನ್ನ ಪಕ್ಷದ ಶಾಸಕನಿಗಿಂತ ಸಮಾಜಘಾತಕ ಶಕ್ತಿಗಳೇ ಅವರಿಗೆ ದೊಡ್ಡವರಾದಂತೆ ಕಾಣುತ್ತಿದೆ ಎಂದು ಗೇಲಿ ಮಾಡಿದರು.

ಶೃಂಗೇರಿ ಶಂಕರಾಚಾರ್ಯರ ಮಂಟಪದ ಮೇಲೆ ಬ್ಯಾನರ್ ಹಾಕಿದ್ದ ಘಟನೆ ಸಂಬಂಧ ಮಂಗಳವಾರ ಶೃಂಗೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮಾಹಿತಿ ಸಿಕ್ಕಿದೆ. ಘಟನೆ ನಡೆದ 24 ಗಂಟೆಯೊಳಗೆ ಸಂಶಯದ ಆಧಾರದ ಆರೋಪಿಯನ್ನು ಬಂಧಿಸಿ ಸತ್ಯ ಬಿಚ್ಚಿಡಲಾಗಿದೆ. ಇದರ ಮೇಲೂ ಕಾಂಗ್ರೆಸ್ಸಿಗರಿಗೆ ಏನಾದರೂ ಸಾಕ್ಷಿ ಇದ್ದರೆ ನೀಡಲಿ. ಎರಡು ದಿನ ಮೊದಲೇ ಘಟನೆ ಬಗ್ಗೆ ಗೊತ್ತಿತ್ತು ಎಂದು ಕೆಲವರು ಹೇಳುತ್ತಿದ್ದು, ಹಾಗೇನಾದರೂ ಇದ್ದರೆ ಈ ಘಟನೆ ನಡೆಯದಂತೆ ಮಾಡಲು ಕಾಂಗ್ರೆಸ್ಸಿಗರಿಗೆ ಸಾಧ್ಯವಿತ್ತು. ಯಾಕೆ ಹಾಗೆ ಮಾಡಲಿಲ್ಲ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶೃಂಗೇರಿಯ ತನಿಕೋಡಿನಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಎಎನ್​ಎಫ್ ಪೇದೆ ನವೀನ್ ಕೊಂದಿದ್ದು ಒಬ್ಬ ದನಗಳ್ಳ ಕಬೀರ್​ನನ್ನು. ಆ ಹಿನ್ನೆಲೆಯಲ್ಲಿ ನವೀನ್ ನಾಯ್್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಚಿಂತೆ ಬೇಡ. ಘಟನೆ ನಡೆದಾಗ ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಕೇಸ್ ಆಗುತ್ತಿರಲಿಲ್ಲ. ಅವರ ಮೇಲಿರುವ ಪ್ರಕರಣ ವಾಪಸ್ ಪಡೆದು ಅವರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net