ಇಲ್ಲಸಲ್ಲದ ಗೊಂದಲ ಸೃಷ್ಟಿಸಿದರೆ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ

4
Published on

ಮಂಡ್ಯ: ಮೈಷುಗರ್ ಕಾರ್ಖಾನೆ ಬಗ್ಗೆ ಇಲ್ಲಸಲ್ಲದ ಗೊಂದಲ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದ್ದಾನೆಂದು ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಕಾರ್ಖಾನೆಯಲ್ಲಿ ಸಮರ್ಪಕವಾಗಿ ಕಬ್ಬು ಅರೆಯುತ್ತಿಲ್ಲ, ಕಬ್ಬಿನ ಹಾಲನ್ನು ಚರಂಡಿಗೆ ಹರಿಸಲಾಗುತ್ತಿದೆ ಎನ್ನುವ ಮಾಹಿತಿ ಹರಿದಾಡಿದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಲ್ಲಿ ಗೊಂದಲ ಸೃಷ್ಟಿಸುವಂತಹ ಕೆಲಸ ಮಾಡುತ್ತಿರುವವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಇನ್ನು ಮುಂದೆ ಅಧಿಕಾರಿಗಳು ಸಹ ಯಾರಿಗೂ ಕಾರ್ಖಾನೆಯೊಳಗೆ ಪ್ರವೇಶ ನೀಡಬಾರದು ಎಂದು ಸೂಚಿಸಿದರು.

ಕಾರ್ಖಾನೆ ನಿಲ್ಲಿಸಬೇಕೆಂಬ ಕಾರಣಕ್ಕೆ ಒಂದು ವರ್ಗ ಹೋರಾಟ ಮಾಡುತ್ತಿದ್ದು, ಅದಕ್ಕೆ ಯಾರೂ ಕೈಜೋಡಿಸಬಾರದು. ಮೈಷುಗರ್ ದಿನೇ ದಿನೇ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ರೈತರು ಆತಂಕಪಡಬೇಡಿ. ಹೊಸ ಯಂತ್ರೋಪಕರಣಗಳೇ ಒಮ್ಮೊಮ್ಮೆ ಕೈ ಕೊಡುತ್ತವೆ. ನೂರಾರು ವರ್ಷ ಇತಿಹಾಸವುಳ್ಳ ಕಾರ್ಖಾನೆಯಲ್ಲಿ ಸಣ್ಣಪುಟ್ಟ ಸಮಸ್ಯೆ ಉಂಟಾಗುತ್ತದೆ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದು ಹೇಳಿದರು.

ಕಾರ್ಖಾನೆ ಪ್ರಾರಂಭವಾಗಿ ಇಂದಿಗೆ 15 ದಿನವಾಗಿದೆ. 30 ಸಾವಿರ ಟನ್ ಕಬ್ಬು ಅರೆಯಲಾಗಿದ್ದು, ಶೇ.6ರಷ್ಟು ಇಳುವರಿ ಬರುತ್ತಿದೆ. ಬೇರೆ ಖಾಸಗಿ ಕಾರ್ಖಾನೆಗಳಲ್ಲಿ ಶೇ.7ರಷ್ಟು ಇಳುವರಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಮೈಷುಗರ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣುತ್ತದೆ. ಇದರಲ್ಲಿ ಯಾವುದೇ ಸಂಶಯವೂ ಇಲ್ಲ. ಉತ್ತಮ ಗುಣಮಟ್ಟದ ಸಕ್ಕರೆ ಅಂದರೆ ಎಸ್.30, ಎಂ.30 ಬರುತ್ತಿದ್ದು, ಒಳ್ಳೆಯ ದರವೂ ಸಿಗಲಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಮೈಷುಗರ್ ರೈತರಿಗೆ ಭಾವನಾತ್ಮಕ ವಿಷಯ. ಆದ್ದರಿಂದ ಕಾರ್ಕಾನೆ ನಿಲ್ಲಿಸಿದ್ದಾರೆ, ಸರಿಯಾಗಿ ನಡೆಯುತ್ತಿಲ್ಲ ಎಂಬ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇನ್ನಾದರೂ ಈ ಕಾರ್ಖಾನೆ ಬಗ್ಗೆ ಒಳ್ಳೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಹೇಳಿದಂತೆ ನಮ್ಮ ಸರ್ಕಾರದಿಂದ ಹೊಸ ಕಾರ್ಖಾನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂಶಯವೂ ಬೇಡ, ಅಲ್ಲಿಯವರೆಗೂ ಈಗ ಹಾಲಿ ಕಾರ್ಖಾನೆಯೇ ಉತ್ತಮವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದ್ದೇವೆ. ಜು.25ರಂದು ಟರ್ಬೈನ್ ಬರುತ್ತಿದೆ. ಈ ತಿಂಗಳೊಳಗೆ ಸಹ ವಿದ್ಯುತ್ ಘಟಕ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದ್ದು, ಶೀಘ್ರ ಪ್ರಾರಂಭವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ರವಿಕುಮಾರ್ ಗಣಿಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಹೋರಾಟಗಾರ್ತಿ ಸುನಂದಾ ಜಯರಾಂ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net