

ಮಂಡ್ಯ: ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಮಾನಕ್ಕೆ ನಾವು ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಮಜಾಯಿಷಿ ಕೊಡುವುದನ್ನು ಸರ್ಕಾರ ಮಾಡಿದೆ. ತಡೆಯಾಜ್ಞೆ ನೀಡಿದರೆ ಕೆಲಸ ಮಾಡಲು ಆಗುವುದಿಲ್ಲ. ಆದ್ದರಿಂದ ಏನಾಗಲಿದೆ ಎನ್ನುವುದನ್ನು ಕಾದು ನೋಡೋಣ. ಕೋರ್ಟ್ ತೀರ್ಮಾನ ಬಿಟ್ಟು ಏನು ಮಾಡಲ್ಲ. ಡ್ಯಾಂ ತೊಂದರೆ, ಜನರ ಸಮಸ್ಯೆ ಬಗ್ಗೆ ವರದಿ ಕೇಳಿರಬಹುದು. ಅದನ್ನು ಸರ್ಕಾರ ನೀಡಲಿದೆ ಎಂದರು.
ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಆದರೆ ದೇವನಹಳ್ಳಿ ಚಲೋ ಹೋರಾಟದಿಂದ ಕೆಲವರು ಬಂದಿಲ್ಲ. ನಾವು ಸಭೆ ಮಾಡಿದ್ದೇವೆ. ಯಾವುದೇ ತರಹದ ಮಾಲಿನ್ಯ, ಡ್ಯಾಂ ಭದ್ರತೆಗೆ ತೊಂದರೆ ಇಲ್ಲ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಹೋರಾಟಗಾರರ ಜತೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮೊನ್ನೆ ಬೆಂಗಳೂರಿನಲ್ಲಿ ನಕಲಿ ಹೋರಾಟಗಾರರ ಜತೆ ಸಭೆ ಎಂದು ಟೀಕಿಸಿದ್ದಾರೆ. ನಾವೆಲ್ಲ ನಕಲಿ, ಅವರೇ ಒಳ್ಳೆಯವರು ಬಿಡಿ. ನಮ್ಮಲ್ಲಿ ಯಾರು ರೈತರು ಇಲ್ವಾ?. ಕಿಸಾನ್ ಸಂಘ ಇದೆ, ಅವರು ರೈತರಲ್ವಾ?. ಇವರು ಹೋರಾಟ ಮಾಡಲಿ ಅಭಿಪ್ರಾಯ ಕೊಡಲಿ. ಆದರೆ ಬೇರೆಯವರನ್ನ ಟೀಕೆ ಮಾಡಬಾರದು. ಇವರು ಬಂದಿದ್ದರೂ ಸಭೆಗೆ ಸ್ವಾಗತ ಇತ್ತು ಎಂದು ಹೇಳಿದರು.
ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್‌ನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿದೆ. ಇದರಿಂದ ಬಹಳ ಜನಕ್ಕೆ ನೋವಾಗಿದೆ. ಕಾರಣ ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಮಳೆ ಬರುವುದಿಲ್ಲ, ಬರಗಾಲ ಬರಲಿದೆ ಎನ್ನುವವರಿಗೆ ಈಗ ನಿದ್ರೆ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಕೆರೆ ಕಟ್ಟೆಗಳು ತುಂಬುತ್ತಿದೆ. ಬೆಳೆಗಳು ಚೆನ್ನಾಗಿ ಆಗುತ್ತಿವೆ. ಇದನ್ನ ಕಂಡು ಕೆಲವರಿಗೆ ಸಂಕಟವಾಗುತ್ತಿದೆ. ಆದರೆ ನಮಗೆ ಬಹಳ ಖುಷಿ ಆಗುತ್ತಿದೆ, ಜನರು ಕೂಡ ಖುಷಿಯಾಗಿದ್ದಾರೆ. 1960ರಿಂದ ಈವರೆಗೆ ಮೊದಲ ಬಾರಿಗೆ ಜೂನ್‌ನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿರುವುದು ನಮ್ಮ ಭಾಗ್ಯ ಎಂದು ಹೇಳಿದರು.
ಸೆಪ್ಟೆಂಬರ್‌ಗೆ ದೊಡ್ಡ ಕ್ರಾಂತಿ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ನನಗೆ ಗೊತ್ತಿಲ್ಲಪ್ಪ. ರಾಜಣ್ಣ ಅವರನ್ನೇ ಕೇಳಿದರೆ ಹೇಳಬಹುದೇನೋ?. ನನಗೆ ಗೊತ್ತಿಲ್ಲ, ರಾಜಣ್ಣ ಸಿಕ್ಕಿಲ್ಲ, ಸಿಕ್ಕಿದರೆ ಏನು ಕ್ರಾಂತಿ ಎಂದು ಕೇಳುತ್ತಿದ್ದೆ. ನನಗೆ ಆ ಬಗ್ಗೆ ಏನು ಗೊತ್ತಿಲ್ಲ. ಸಿಎಂ, ಡಿಸಿಎಂ ಇಬ್ಬರು ಖುಷಿಯಾಗಿದ್ದಾರೆ. ನಮ್ಮ ಹೈಕಮಾಂಡ್ ತೀರ್ಮಾನ ಅವರಿಗೆ ಬಿಟ್ಟಿದ್ದು. ಸಿಎಂ ಭೇಟಿ ಮಾಡಿ ಮಾತನಾಡಿದ್ದಾರೆ. ನಮ್ಮಲ್ಲಿ ಎಲ್ಲವೂ ಗುಡ್. ಯಾವುದೇ ಘರ್ಷಣೆ ಇಲ್ಲ. ಮಳೆ ಬಂದಿದೆ ಜನರಿಗೆ ಅನುಕೂಲವಾಗುವ ಕೆಲಸ ಮಾಡುತ್ತೇವೆ. ಕೆಲವರಲ್ಲಿ ಅಸಮಾಧಾನ ಇರಲಿದೆ. ಮುಖ್ಯಮಂತ್ರಿ ಅವರು ಅದನ್ನು ಸರಿಪಡಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಗೊತ್ತಿಲ್ಲ. ಮುಖ್ಯಮಂತ್ರಿ, ಅಧ್ಯಕ್ಷ ಸ್ಥಾನ ಅವರವರ ವಿಚಾರ. ನಾನು ರೈತರ ಬಗ್ಗೆ ಗಮನ ಕೊಡುತ್ತಿದ್ದೇನೆ. ರಾಜ್ಯದ ಸಮಸ್ಯೆಗಳ ಬಗ್ಗೆ ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ಕೆಆರ್‌ಎಸ್ ಡ್ಯಾಂ ತುಂಬಿದೆ, ಬಾಗಿನ ಅರ್ಪಣೆ ಮಾಡಬೇಕು. ಬರೀ ಇದನ್ನೇ ನೋಡಿಕೊಂಡು ಹೋದರೇ ರೈತರ ಪರಿಸ್ಥಿತಿ ನೋಡೋರು ಯಾರು?. ಮಲೈ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಾವು ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಆಗಲಿದೆ. ಅರಣ್ಯ ಸಚಿವರು ಸ್ಥಳಕ್ಕೆ ಹೋಗಿದ್ದಾರೆ. ಯಾರು ಕಾರಣ ಎಂದು ಪರಿಶೀಲಿಸಿ ಕಾನೂನು ಬದ್ಧ ಕ್ರಮ ಎಂದರು.
ಮಾವು ಬೆಳೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ ವಿಷಯಕ್ಕೆ ಪ್ರತಿಕ್ರಿಯಿಸಿ, ಜೂ.11ರಂದೇ ನಾವು ಪತ್ರ ಬರೆದಿದ್ದೇವೆ. 20ರಂದು ಮಾತನಾಡಿದ್ದೇವೆ. 21ರಂದು ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಅವತ್ತೆ ನಿರ್ಧಾರ ಆಗಿದೆ. ಜೂ.22ಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಅದಕ್ಕೆ ಅನುಮೋದನೆ ಎಂದು ಉತ್ತರ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು, ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಹೇಳಲು ಆಗುತ್ತಾ?. ಇಂತಹ ರಾಜಕಾರಣ ಮಾಡಿದರೆ ಏನು ಮಾಡೋದು. ಕುಮಾರಸ್ವಾಮಿ ರಾಜಕಾರಣವಾಗಿ ಬಂದರೆ ಉತ್ತರ ಕೊಡುತ್ತೇನೆ ಎಂದರು.