ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

Minister CRS meeting with Highways Authority officials Mandya
Published on

ಮಂಡ್ಯ: ಜಿಲ್ಲೆ ಮೂಲಕ ಹಾದು ಹೋಗುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.

ಬೆಂಗಳೂರಿನ ವಿಕಾಸಸೌಧ ಕಚೇರಿಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಮುಕ್ತಾಯಗೊಳಿಸುವಂತೆ ತಿಳಿಸಿದರು.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬೆಳ್ಳೂರು ಕ್ರಾಸ್, ನಾಗಮಂಗಲ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನಡೆಯಬೇಕಿರುವ ಕಾಮಗಾರಿ ಬೇಗ ಪೂರ್ಣಗೊಳಿಸಿದೆ. ಕಾಮಗಾರಿಗೆ ಅಗತ್ಯ ವಿರುವ ಹೆಚ್ಚುವರಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡಿ. ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಕೆ.ಬಿ ಕ್ರಾಸ್‌ನಿಂದ ಚುಂಚನಹಳ್ಳಿ ರಸ್ತೆ ವಿಸ್ತರಣೆ, ಮೇಲು ಸೇತುವೆ ಕಾಮಗಾರಿಯನ್ನು ದೂರದೃಷ್ಟಿ ಚಿಂತನೆಯೊಂದಿಗೆ ರೂಪಿಸಿ ಅನುಷ್ಠಾನ ಮಾಡಬೇಕು ಎಂದು ಸೂಚನೆ ನೀಡಿದರು.

ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ಅದಕ್ಕೆ ಸಂಪರ್ಕಿತ ಸರ್ವೀಸ್ ರಸ್ತೆಗಳಲ್ಲಿ ಬಾಕಿಯಿರುವ ಕಾಮಗಾರಿ, ಬೆಂಗಳೂರಿನಿಂದ ಹಾಸನ, ಮೈಸೂರು-ಕೆ.ಆರ್.ಪೇಟೆ ಮತ್ತು ಮೈಸೂರು-ನಾಗಮಂಗಲ ರಸ್ತೆಗಳಿಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಇತರ ಕಾನೂನು ಕಾರ್ಯವಿಧಾನಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಹಾದುಹೋಗುವ ಎಲ್ಲ ರಸ್ತೆಗಳ ಗುಂಡಿ ಮುಚ್ಚಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net