ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Minister CRS launches survey Mandya
Published on

ಮಂಡ್ಯ: ರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಸಮೀಕ್ಷೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಮೀಕ್ಷೆಗೆ ನಗರದ 20ನೇ ವಾರ್ಡ್‌ನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ ಕೈಗೊಳ್ಳಲಾಗಿದೆ. ಆದ್ದರಿಂದ ಸಮೀಕ್ಷೆದಾರರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ನಿಖರ ಮಾಹಿತಿ ನೀಡಿ. ಅದೇ ರೀತಿ ಸಮೀಕ್ಷೆದಾರರು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಿ. ಜನರಿಗೆ ಅರ್ಥವಾಗುವ ರೀತಿ ಪ್ರಶ್ನೆಯನ್ನು ಕೇಳಿ ಉತ್ತರ ಪಡೆಯಿರಿ ಎಂದು ಸೂಚನೆ ನೀಡಿದರು.

ರಾಜ್ಯ ಸಂಪನ್ಮೂಲ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ 5,29,032 ಕುಟುಂಬಗಳಿವೆ. ಸಮೀಕ್ಷೆಗೆಂದು 4,446 ಗಣತಿದಾರರನ್ನು ನೇಮಕ ಮಾಡಲಾಗಿದೆ. ಪ್ರತಿ ಗಣತಿದಾರರಿಗೆ 120 ಕುಟುಂಬದಂತೆ ಬ್ಲಾಕ್ ಹಂಚಿಕೆ ಮಾಡಲಾಗಿದೆ. 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಸಮೀಕ್ಷೆಯಲ್ಲಿ ಮನೆಯ ಮುಖ್ಯಸ್ಥರ ಹೆಸರು, ತಂದೆ ಹಾಗೂ ತಾಯಿ ಹೆಸರು, ಮನೆ ವಿಳಾಸ, ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ, ಕುಟುಂಬದ ಒಟ್ಟು ಸದಸ್ಯರು, ಧರ್ಮ, ಜಾತಿ/ಉಪಜಾತಿ, ವರ್ಗ, ಜಾತಿ ಪ್ರಮಾಣ ಪತ್ರ, ಜನ್ಮ ದಿನಾಂಕ, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಜನ್ಮಸ್ಥಳ, ವಿದ್ಯಾಭ್ಯಾಸದ ಮಟ್ಟ, ಮನೆಯ ಮುಖ್ಯ ಉದ್ಯೋಗ ಸೇರಿದಂತೆ ಒಟ್ಟು 60 ಪ್ರಶ್ನೆ ಕೇಳಲಾಗುವುದು ಎಂದು ವಿವರಿಸಿದರು.

ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net