ಜಿಎಸ್‌ಟಿ ಸಮಸ್ಯೆ ಕೇಂದ್ರ ಸರ್ಕಾರ ಸರಿಪಡಿಸಲಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಒತ್ತಾಯ

Minister-N.Cheluvarayaswamy
Published on

ಮಂಡ್ಯ: ಜಿಎಸ್‌ಟಿ ನಿಗದಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೆರಿಗೆ ಹಾಕಿದರೆ ಸಮಸ್ಯೆ ಆಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಒತ್ತಾಯಿಸಿದರು.

ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟೀಸ್ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮನುಷ್ಯರಲ್ಲ. ಅವರ ಬಗ್ಗೆ ಹೇಳಬೇಡಿ. ಅವರಿಗೆ ಏನು ಹೇಳಬೇಕು ಎನ್ನುವುದೇ ಗೊತ್ತಿಲ್ಲ. ಬಿಜೆಪಿಗೆ ಹಿಂದೆ ಮಾಡಿರುವ ಸಾಧನೆ ಇಲ್ಲ, ಮುಂದೆ ಗುರಿ ಇಲ್ಲ. ಸುಮ್ಮನೆ ಏನೋ ಹೇಳುತ್ತಾರೆ. ಜಿಎಸ್‌ಟಿ ಸಂಗ್ರಹ ಮಾಡಲು ರಾಜ್ಯದ ಯೂನಿಟ್ ಇದೆ. ಅವರು ಸಂಗ್ರಹ ಮಾಡುತ್ತಾರೆ. ಅದನ್ನು ತೆಗೆಯುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಈ ಹಿನ್ನೆಲೆಯಲ್ಲಿ ಕೇಂದ್ರ ಆದೇಶ ಕೊಟ್ಟಿದೆ, ರಾಜ್ಯದ ಯೂನಿಟ್ ಪಾಲನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಕಾಶ ಇದಂತೆ. ರಾಜ್ಯ ಸರ್ಕಾರ ಹತ್ತಿರ ಇದೆ ಅಷ್ಟೆ ಎಂದರು.

ರಾಜ್ಯದಲ್ಲಿ ಯೂರಿಯಾ ಅಭಾವ ವಿಚಾರಕ್ಕೆ ಪ್ರತಿಕ್ರಿಯಿಸಿ, ನೂರಕ್ಕೆ ನೂರರಷ್ಟು ದಾಸ್ತಾನು ಇಲ್ಲ. ಸಮಸ್ಯೆ ಇದೆ. ಇರಾನ್‌ನಿಂದ ಆಮದು ಆಗುತ್ತಿಲ್ಲ. ಚೀನಾ ರಫ್ತು ನಿಲ್ಲಿಸಿದ್ದಾರೆ. ಏಪ್ರಿಲ್ನಿಂದ ಜುಲೈವರೆಗೆ 6 ಲಕ್ಷದ 80 ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇತ್ತು. ಈಗಾಗಲೇ 6 ಲಕ್ಷದ 60 ಸಾವಿರ ಮೆಟ್ರಿಕ್ ಟನ್ ಮಾರಾಟ ಮಾಡಿದ್ದೇವೆ. 1 ಲಕ್ಷದ 94 ಸಾವಿರ ಮೆಟ್ರಿಕ್ ಟನ್ ಮಾತ್ರ ಸಧ್ಯಕ್ಕೆ ದಾಸ್ತಾನು ಇದೆ. ಹಾವೇರಿಯಲ್ಲಿ 36 ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇತ್ತು. 40 ಸಾವಿರ ಮೆಟ್ರಿಕ್ ಟನ್ ಕೊಟ್ಟಿದ್ದೇವೆ. ರೈತರು ಸ್ಪಲ್ಪ ಒತ್ತಡ ತರುತ್ತಿದ್ದಾರೆ. ಜುಲೈನಲ್ಲೇ ಅಣೆಕಟ್ಟೆಗಳಿಂದ ನೀರು ಬಿಟ್ಟಿದ್ದಾರೆ. ಒಂದು ತಿಂಗಳು ಮುಂಚಿತವಾಗಿ ಕೃಷಿ ಚಟುವಟಿಕೆ ಆರಂಭವಾದ ಹಿನ್ನೆಲೆಯಲ್ಲಿ ಸಮಸ್ಯೆ ಆಗಿದೆ. ಕೇಂದ್ರದಿಂದ ಯೂರಿಯಾ, ಡಿಎಪಿ ಕಡಿಮೆ ಬರಲಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ರೈತರು ಗೊಬ್ಬರ ಖರೀದಿ ಮುಂದಾಗಿದ್ದಾರೆ. ಆದರೆ ಆತಂಕಪಡುವ ಅವಶ್ಯಕತೆ ಇಲ್ಲ. ರೈತರಿಗೆ ಸಮರ್ಪಕವಾಗಿ ಗೊಬ್ಬರ ಕೊಡುತ್ತೇವೆ. ನಮ್ಮ ಸರ್ಕಾರ ರೈತರಿಗಾಗಿ ರಸಗೊಬ್ಬರ ಸರಬರಾಜು ಮಾಡಲಿದೆ. ಸಹಕಾರ ಕೊಡಿ, ಯಾವುದೇ ತೊಂದರೆ ಇಲ್ಲ ಎಂದು ಮನವಿ ಮಾಡಿದರು.

ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಏನೋ ಇದೆ, ಸ್ಪಲ್ಪ ದಿನ ಹೊಗೆ ಆಡುತ್ತೆ. ಎರಡು ದಿನ ಆದ ಮೇಲೆ ಎಲ್ಲವೂ ಹೊರಗೆ ಬರುತ್ತದೆ ಎಂದ ಅವರು, ಶಾಸಕರಿಗೆ ಅನುದಾನ ತಾರತಮ್ಯ ವಿಚಾರಕ್ಕೆ ಉತ್ತರಿಸಿ, ಎಲ್ಲ ಶಾಸಕರಿಗೂ ತಲಾ 50 ಕೋಟಿ ರೂ ಕೊಟ್ಟಿದ್ದಾರೆ. ಕಳೆದ ಬಜೆಟ್‌ನಲ್ಲಿ ಕೊಟ್ಟ ಭರವಸೆಯನ್ನು ಇವಾಗ ಅನುಷ್ಠಾನ ಮಾಡಿದ್ದಾರೆ. ಅಸೆಂಬ್ಲಿ ಬರಲಿದೆ ಎಂದು ಅನುದಾನ ಕೊಟ್ಟಿಲ್ಲ. ಬಿಜೆಪಿಯವರಿಗೂ 25 ಕೋಟಿ ರೂ ಕೊಟ್ಟಿದ್ದಾರೆ. ಆದರೆ ಬಿಜೆಪಿ ಸರ್ಕಾರ ಇದ್ದಾಗ ನಮಗೆ ಕೊಟ್ಟಿರಲಿಲ್ಲ. ನಾವು ಅಷ್ಟಾದರೂ ಕೊಟ್ಟಿದ್ದೇವೆ ಎಂದರು.

ಧರ್ಮಸ್ಥಳ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಹಲವು ಸಂಘಟನೆ ಮತ್ತು ಹೋರಾಟಗಾರರ ಒತ್ತಾಯದ ಮೆರೆಗೆ ಎಸ್‌ಐಟಿ ತನಿಖೆಗೆ ಕೊಡಲಾಗಿದೆ. ತನಿಖೆ ಆಗಲಿದೆ. ಒಂದು ವೇಳೆ ಏನು ಆಗದಿದ್ದರೆ ಪ್ರಕರಣ ಮುಕ್ತಾಯವಾಗಲಿದೆ. ತನಿಖೆ ಆದರೆ ತಪ್ಪೇನು?. ಅನುಮಾನಕ್ಕೆ ಸ್ಪಷ್ಟತೆ ಸಿಗಲಿದೆ. ಜತೆಗೆ ಅನುಮಾನ ಪಡುವುದು ನಿಲ್ಲಲಿದೆ. ಬಿಜೆಪಿಯವರು ಬರಿ ಕಡ್ಡಿ ಅಲ್ಲಡಿಸುತ್ತಾರೆ. ಆದ್ದರಿಂದ ಅವರಿಗೆ ಉತ್ತರ ಕೊಡಲ್ಲ ಎಂದು ತಿರುಗೇಟು ನೀಡಿದರು.

ಮಂಡ್ಯ ತಾಲೂಕು ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ನಡೆಯುತ್ತಿರುವ ಬಗ್ಗೆ ಮಾತನಾಡಿದ ಸಚಿವ ಸಿಆರ್‌ಎಸ್, ಇದರ ಬಗ್ಗೆ ಡಿಸಿ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಎರಡೂ ಕಡೆಯವರ ಜತೆ ಮಾತನಾಡಲು ಸೂಚನೆ ಕೊಟ್ಟಿದ್ದೇನೆ. ಒಂದು ಕಡೆ ಅವರ ಪದ್ಧತಿ, ಇನ್ನೊಂದು ಕಡೆ ಪೌಷ್ಟಿಕ ಆಹಾರ ಕೊಡಬೇಕು. ಕೊಡದಿದರೆ ತಪ್ಪು. ಇದನ್ನು ಯಾರು ಪ್ರತಿಷ್ಠೆಯಾಗಿ ತೆಗೆಕೊಳ್ಳಬಾರದು. ಅವರು ಬೇಡ ಎಂದರೆ ಏನು ಮಾಡಕ್ಕಾಗಲ್ಲ. ಆದರೆ ಬೇಕು ಎಂದರೆ ಕೊಡಲ್ಲವೆಂದು ಹೇಳಕ್ಕಾಗುತ್ತಾ. ಕರೆಸಿ ಬುದ್ದಿ ಹೇಳುತ್ತೇವೆ. ಈ ಮೂಲಕ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net