ಜೆಡಿಎಸ್ ವಿರುದ್ಧ ಸಚಿವ ಸಿಆರ್‌ಎಸ್ ಆಕ್ರೋಶ: ಸ್ವಾಭಿಮಾನಿ ಜನತೆ ನೋಡಿಕೊಳ್ಳುತ್ತಾರೆಂದ ಚಲುವರಾಯಸ್ವಾಮಿ

07_01_Mdy_03(A(Minister N.Cheluvarayaswamy)
Published on

ಮಂಡ್ಯ: ಮಂಡ್ಯ ತಾಲೂಕಿನ ವಿ.ಸಿ ಾರ್ಮ್‌ನಲ್ಲಿ ನೂತನ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಂಕಿತ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಕೃಷಿ ವಿವಿ ಸ್ಥಾಪನೆ ಮಾಡದಂತೆ ಪಿತೂರಿ ನಡೆಸಿದವರ ವಿರುದ್ಧ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2025ನೇ ಸಾಲಿನ ಮಂಡ್ಯ ಕೃಷಿ ವಿಜ್ಞಾನಗಳ (ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕವನ್ನು ಉಭಯ ಸದನದಲ್ಲಿ ಮಂಡಿಸಿದರು. ವಿಧಾನಸಭೆಯಲ್ಲಿ ಅಂಗೀಕಾರವಾಗಿ ಬಂದಿದ್ದ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಅಧಿಕೃತವಾಗಿ ಅಂಗೀಕರಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ರಾಜ್ಯಪಾಲರನ್ನು ಭೇಟಿ ಮಾಡಲಾಗಿತ್ತು. ಸಚಿವ ಸಿಆರ್‌ಎಸ್ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲರು, ನೂತನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿಧೇಯಕಕ್ಕೆ ಸಹಮತಿ ನೀಡಿ ವಿವಿಗೆ ಅಂಕಿತ ಹಾಕಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಸಿಆರ್‌ಎಸ್, ಜಿಲ್ಲೆಗೆ ಒಂದು ಕೃಷಿ ವಿಶ್ವವಿದ್ಯಾನಿಲಯ ಬೇಕು ಎನ್ನುವ ಕೂಗು ಹಲವು ದಶಕಗಳಿಂದ ಕೇಳಿಬರುತ್ತಿದ್ದಾದರೂ, ನಮ್ಮ ಸರ್ಕಾರದ ಅವಧಿಯಲ್ಲಿ ಸಾಕಾರಗೊಳ್ಳುತ್ತಿರುವುದಕ್ಕೆ ಹೆಮ್ಮೆಯಿದೆ. ಈ ಪ್ರಕ್ರಿಯೆಯಲ್ಲಿ ಉಂಟಾದ ಅನೇಕ ಅಡೆ ತಡೆಗಳನ್ನು ದಾಟಿ ಬಂದಿರುವುದನ್ನು ಬಹುಶಃ ಜಿಲ್ಲೆಯ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ವಿಧಾನಸಭೆಯಲ್ಲಿ ಹೊಳೆನರಸೀಪುರದ ಶಾಸಕ ಎಚ್.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿದ್ದು ತಪ್ಪು ಎನ್ನುವ ಬಗ್ಗೆ ಮಂಡ್ಯ ಸಂಸದರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತುಟಿ ಬಿಚ್ಚದಿರುವುದು ಜಿಲ್ಲೆಯ ಜನತಗೆ ಮಾಡಿದ ಮಹಾ ಮೋಸವಾಗಿದೆ ಎಂದಿದ್ದಾರೆ.

ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯ ನಿರ್ಮಾಣವಾಗದಂತೆ ವ್ಯವಸ್ಥಿತ ಪಿತೂರಿ ನಡೆಸಿದ ಅವರಿಗೆ ಜಿಲ್ಲೆಯ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಜಿಲ್ಲೆಯ ಅಭಿವೃದ್ಧಿಗೆ ವಿರುದ್ಧವಾದ ಧೋರಣೆ ತೋರುವ ಅವರನ್ನು ಸ್ವಾಭಿಮಾನಿ ಮಂಡ್ಯದ ಜನತೆ ನೋಡಿಕೊಳ್ಳುತ್ತಾರೆ. ಅಂತೆಯೇ ವಿಧೇಯಕಕ್ಕೆ ಸಹಮತಿ ನೀಡಿ ಅನುಮೋದಿಸಿರುವ ರಾಜ್ಯಪಾಲರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net