ಎಚ್ಡಿಕೆಗೆ ಚಪಲ, ಚಟಕ್ಕೆ ಮಾತನಾಡ್ತಾರೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

Minister-N.Cheluvarayaswamy
Published on

ಮಂಡ್ಯ: ರಾಜ್ಯಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚಪಲ, ಚಟಕ್ಕೆ ಮಾತನಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಶೇ.60 ಲಂಚ ಆರೋಪ ಮಾಡಿದ್ದಾರೆ. ಕೇಂದ್ರ ಸಚಿವರು ಯಾವುದಾದರೂ ವಿಷಯ ಮಾತನಾಡಿದರೆ, ಅದಕ್ಕೆ ಉತ್ತರ ನೀಡಲು ನಾವು ತಡಕಾಡಬೇಕು. ಆ ರೀತಿ ಅವರು ಮಾತನಾಡಿದಾಗ ನಮಗೂ ಖುಷಿಯಾಗುತ್ತದೆ. ಆದರೆ ಅವರು ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಆದ್ದರಿಂದ ಎಚ್‌ಡಿಕೆ ಅವರಿಗೆ ಉತ್ತರ ಕೊಡಬೇಕು ಎನಿಸಲ್ಲ ಎಂದು ಹೇಳಿದರು.

ಜನರ ತೀರ್ಮಾನ ಅಂತಿಮ ಎನ್ನುವುದನ್ನ ಎಚ್ಡಿಕೆ ನಂಬುತ್ತಾರಾ?. ಕಳೆದ ಮೂರು ಕ್ಷೇತ್ರದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲ ಸರ್ವೆಗಳನ್ನು ಮೀರಿ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಆ ಫಲಿತಾಂಶ ಸರ್ಕಾರದ ಮೇಲಿನ ಜನರಿಗಿರುವ ವಿಶ್ವಾಸ ತೋರಿಸುತ್ತದೆ. ಆದ್ದರಿಂದ ಕೇಂದ್ರ ಸಚಿವರು ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಟೀಕೆ ಮಾಡುವುದೇ ನಾಯಕತ್ವ ಎನ್ನುವ ರೀತಿ ಮಾತನಾಡಬಾರದು ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಕಾರು ಕೊಟ್ಟಿಲ್ಲ ಎನ್ನುವ ಮಾತನಾಡಿದ್ದಾರೆ. ಕುಮಾರಸ್ವಾಮಿ ಅವರಿಂದ ಈ ರೀತಿಯ ಮಾತು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಸಂಸದನಾಗಿದ್ದಾಗ ಅಂಬರೀಷ್ ಅವರು ಬಳಸುತ್ತಿದ್ದ ಕಾರು ಕೊಟ್ಟಿದ್ದರು. ಆಗ ಹೊಸ ಕಾರು ಬರಲು ವರ್ಷ ಬೇಕಾಗಿತ್ತು. ಸಚಿವನಾದ ಮೇಲೂ ಹಳೇ ಕಾರನ್ನೇ ಬಳಸುತ್ತಿದ್ದೆ. ಕಾರು ಕೊಡಲು ಸರ್ಕಾರ ಕೆಲವು ನಿಯಮಗಳನ್ನು ಅನುಸರಿಸಬೇಕು. ಸುಮಲತಾ ಅವರು ಕುಳಿತಿದ್ದ ಕಾರಲ್ಲಿ ನಾನು ಕೂರಲ್ಲ ಎಂದವರು ಕುಮಾರಸ್ವಾಮಿ. ಓರ್ವ ಎಂಪಿ ಉಪಯೋಗಿಸಿದ್ದ ಕಾರು, ಉಪಯೋಗಿಸಲು ಸಮಸ್ಯೆ ಏನಿತ್ತು?. ಅದಕ್ಕೆ ಕಾರಣ ಅವರೇ ಹೇಳಬೇಕು. ಕುಮಾರಸ್ವಾಮಿಯ ಇಂತಹ ಮಾತುಗಳಿಗೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಹರಿಶ್ಚಂದ್ರ ಮರಣ ಹೊಂದಿದ ಬಳಿಕ ಕುಮಾರಸ್ವಾಮಿಯವರೆ ಸತ್ಯಹರಿಶ್ಚಂದ್ರ. ಲಂಚ ಮುಟ್ಟದೆ, ಭ್ರಷ್ಟಾಚಾರ ಮಾಡದೆ ಇರುವವರು ಎಚ್ಡಿಕೆ ಒಬ್ಬರೇ ಅನಿಸುತ್ತದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ವಿಚಾರ ಎನ್ನುವ ಮಾತಿಗೆ ಪ್ರತಿಕ್ರಿಯಿಸಿ, ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡಬೇಕಾಗಿದ್ದ ಅನುದಾನದಲ್ಲಿ ಕಿಕ್ಕೇರಿ-ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿಯಾಗುತ್ತಿದೆ. ಕೇಂದ್ರ ವಿಶೇಷ ಅನುದಾನ ನೀಡಿ ಅಭಿವೃದ್ಧಿ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯದ ಕೋಟಾದಲ್ಲಿ ನೀಡುವ ಅನುದಾನದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಆದಾಗ್ಯೂ ಎಚ್.ಡಿ.ಕುಮಾರಸ್ವಾಮಿ ವಿಶೇಷ ಅನುದಾನ ತಂದರೆ ಅಭಿನಂದಿಸುತ್ತೇನೆ. ಪಾಂಡವಪುರದಿಂದ ಚನ್ನರಾಯಪಟ್ಟಣ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಗೆ ಪರಿವರ್ತನೆ ಮಾಡಲಿ. ಇದು ಸವಾಲಲ್ಲ, ಬದಲಿಗೆ ಮನವಿ. ಆ ಕೆಲಸ ಮಾಡಿದರೆ ಕುಮಾರಸ್ವಾಮಿ ಅವರನ್ನು ನಾನೇ ಖುದ್ದು ಅಭಿನಂದಿಸುತ್ತೇನೆ. ನಾವು ಗ್ಯಾರಂಟಿಗೆ ಸೀಮಿತವಾಗಿಲ್ಲ. ಸಾವಿರಾರು ಕೋಟಿ ರೂ ಅನುದಾನ ತಂದು ಮಂಡ್ಯ ಅಭಿವೃದ್ಧಿಗೆ ಬದ್ಧವಾಗಿದ್ದೇವೆ ಎಂದರು.

ಬಸ್ ಪ್ರಯಾಣ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಸ್ ಪ್ರಯಾಣ ದರ ಪರಿಷ್ಕರಣೆ ಆಗಿ 15 ವರ್ಷ ಆಗಿದೆ. ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಿದೆ. ಬಸ್ ದರ ಹೆಚ್ಚು ಮಾಡದಿದ್ದರೆ ನಿಗಮ ನಡೆಸುವುದು ಹೇಗೆ?. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಬಸ್ ದರ ಕಡಿಮೆ ಇದೆ. ಆದ್ದರಿಂದ ಗ್ಯಾರಂಟಿ ಯೋಜನೆಗೂ ಬಸ್ ದರ ಹೆಚ್ಚಳಕ್ಕೂ ಸಂಬಂಧ ಇಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಿ, ನಡೆಸಿ ಎನ್ನಲು ಇವರ‌್ಯಾರು?. ವಿರೋಧಪಕ್ಷದವರನ್ನ ಕೇಳಿ ಗ್ಯಾರಂಟಿ ಯೋಜನೆ ನಿಲ್ಲಿಸಲು ಆಗಲ್ಲ. ಜನಸಾಮಾನ್ಯರು ಗ್ಯಾರಂಟಿ ಬೇಡ, ಅಭಿವೃದ್ಧಿ ಬೇಕು ಎಂದಾಗ ಸರ್ಕಾರ ಯೋಚಿಸಲಿದೆ ಎಂದರು.

ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮಂತ್ರಿಸ್ಥಾನ ನೀಡುವಂತೆ ನಮ್ಮೆಲ್ಲರ ಒತ್ತಾಯವೂ ಇದೆ. ಆದರೆ ಅದರ ಅಧಿಕಾರ ಸಿಎಂಗೆ ಇದೆ. ಸಿಎಂ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ. ಜಾರಕಿಹೊಳಿ ನಿವಾಸದಲ್ಲಿ ಸಿಎಂ ಡಿನ್ನರ್ ಮೀಟಿಂಗ್ ಮಾಡಲಾಗಿದೆ. ಆದರೆ ಊಟ ಮಾಡಿದ ಮಾತ್ರಕ್ಕೆ ರಾಜಕೀಯ ಮಾಡಲು ಹೋಗಿದ್ದರೂ ಎನ್ನುವುದಲ್ಲ. ವಿರೋಧ ಪಕ್ಷದವರು ಕೆಲಸವಿಲ್ಲದಿದ್ದಾಗ ಈ ರೀತಿ ಸೃಷ್ಟಿಸುತ್ತಿದ್ದಾರೆ. ಟೀಕೆ ಮಾಡಿಕೊಂಡು ಜೀವನ ಕಳೆಯುತ್ತಿದ್ದಾರೆ. ಅವರಿಗೆ ಮುಂದೆ ಗುರಿಯಿಲ್ಲ, ಮಾತನಾಡಲು ಯಾವ ಸಾಧನೆಯನ್ನು ಮಾಡಿಲ್ಲ ಎಂದ ಅವರು, ಸಿಎಂ ಡಿನ್ನರ್ ಮೀಟಿಂಗ್ ಬಳಿಕ ಒಕ್ಕಲಿಗ ನಾಯಕರ ಪ್ರತ್ಯೇಕ ಸಭೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಒಕ್ಕಲಿಗ ನಾಯಕರು ಮೂರ‌್ನಾಲ್ಕು ಸಭೆ ನಡೆಸಿದ್ದೇವೆ. ಅದು ರಾಜಕೀಯಕ್ಕಲ್ಲ, ಬದಲಿಗೆ ಸಮುದಾಯದ ಏಳಿಗೆ ಕುರಿತು ಸಭೆ ನಡೆಸಿದ್ದೇವೆ ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net