

ಬಳ್ಳಾರಿ: ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ ನಗರದ ವಿವಿಧ ಪ್ರದೇಶಗಳಿಗೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಮೂಲ ಸೌಕರ್ಯ ಹಾಗೂ ಸ್ವಚ್ಛತೆ ಪರಿಶೀಲಿಸಿದರು. ಸ್ವಚ್ಛತೆ ಕಾಣದ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಮುನ್ಸಿಪಲ್ ಹೈಸ್ಕೂಲ್ ಮೈದಾನದ ತರಕಾರಿ ಮಾರುಕಟ್ಟೆಯಲ್ಲಿ ಕಸ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಆರೋಗ್ಯ ನಿರೀಕ್ಷಕರನ್ನು ಅಮಾನತು ಮಾಡುವಂತೆ ಸೂಚಿಸಿದರು. ಕಂಬಳಿ ಬಜಾರ್‌ನಲ್ಲಿ ರಸ್ತೆ, ಒಳ ಚರಂಡಿ ನಿರ್ಮಾಣ ಕಾಮಗಾರಿ ಪರಿಶೀಲನೆ ವೇಳೆ ಕುಡಿಯುವ ನೀರು ಚರಂಡಿಗೆ ಸೇರುತ್ತಿರುವುದು ಹಾಗೂ ತೆರೆದ ಚರಂಡಿಯಲ್ಲಿ ಕಸ ತುಂಬಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯದುರ್ಗ ಹಳೇ ಬಸ್ ನಿಲ್ದಾಣ, ಕಮೇಲ ರಸ್ತೆ ವಿಸ್ತರಣೆ ವೀಕ್ಷಿಸಿದರು. ಬಾಪೂಜಿ ನಗರದಲ್ಲಿ ತೆರೆದ ಚರಂಡಿಗಳನ್ನು ನೋಡಿ ಮಕ್ಕಳು ಬಿದ್ದರೆ ಏನು ಗತಿ ಸಚಿವರು ಬರುತ್ತಾರೆ ಎಂಬ ಮಾಹಿತಿ ಇದ್ದರೂ ಕಸದ ರಾಶಿ ಇದೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ತೆರೆದ ಚರಂಡಿ ಕಾಮಗಾರಿಗೆ ಯೋಜನೆ ರೂಪಿಸಿ ವರದಿ ಸಲ್ಲಿಸಬೇಕು. ಆರೋಗ್ಯ ನಿರೀಕ್ಷಕರನ್ನು ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದೊಡ್ಡ ಮಾರುಕಟ್ಟೆ ನಿರ್ಮಾಣ ಪರಿಶೀಲಿಸಿ ಕಾಮಗಾರಿ ತ್ವರಿತ ಮುಗಿಸಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದರು. ನಾನು ಮತ್ತೆ ನಗರಕ್ಕೆ ಭೇಟಿ ನೀಡಿದಾಗ ಇದೇ ಪರಿಸ್ಥಿತಿ ಇದ್ದರೆ ಎಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ನಿಮಗೆ ಕೆಳ ಹಂತದ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಪಾಲಿಕೆಯ ಮುಖ್ಯಸ್ಥರಾದ ನೀವೇ ಜವಾಬ್ದಾರರಾಗುತ್ತೀರಿ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಎಚ್ಚರಿಕೆ ನೀಡಿದರು.
ತಾಳೂರು ರಸ್ತೆಯಲ್ಲಿ ಮಹಿಳಾ ಪೌರ ಕಾರ್ಮಿಕರ ಸಮಸ್ಯೆ ಆಲಿಸಿದರು. ಮಹಾನಗರ ಪಾಲಿಕೆ ಆಯುಕ್ತರು ನಮಗೆ ಎಲ್ಲ ಸೌಲಭ್ಯ ಕಲ್ಪಿಸಿದ್ದಾರೆ. ಬೆಳಗ್ಗೆ ಉಪಹಾರವನ್ನೂ ನೀಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರ ಬಗ್ಗೆ ಪೌರ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಜಿ.ಸೋಮಶೇಖರರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ, ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ, ಪಾಲಿಕೆಯ ಮಾಜಿ ಸದಸ್ಯ ಎಸ್.ಮಲ್ಲನಗೌಡ ಹಾಗೂ ಇತರರಿದ್ದರು.