

ಮಂಡ್ಯ: ರಾಜ್ಯ ಕೃಷಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಜೂ.3ರಂದು ಜಿಲ್ಲೆಗೆ ಆಗಮಿಸುತ್ತಿರುವ ಎನ್.ಚಲುವರಾಯಸ್ವಾಮಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ ತಿಳಿಸಿದರು.
ಮದ್ದೂರು ತಾಲೂಕು ನಿಡಘಟ್ಟ ಬಳಿ ಚಲುವರಾಯಸ್ವಾಮಿ ಅವರನ್ನು ಬೆಳಗ್ಗೆ 10.30ಕ್ಕೆ ಜಿಲ್ಲೆಯ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಸ್ವಾಗತಿಸಲಾಗುವುದು. ಮದ್ದೂರು ವಿಧಾನಸಭಾ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮದ್ದೂರು, ಗೆಜ್ಜಲಗೆರೆ, ಬೂದನೂರು ಮಾರ್ಗವಾಗಿ ಮಂಡ್ಯ ನಗರಕ್ಕೆ ಆಗಮಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದಕ್ಕೂ ಮುನ್ನ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸುವ ಹನಕೆರೆಯಲ್ಲಿ ಸ್ವಾಗತಿಸಿ ಕರೆತರಲಾಗುವುದು. ಮಧ್ಯಾಹ್ನ 1ಗಂಟೆಗೆ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಆಯೋಜಿಸಿರುವ ಅಭಿನಂದನೆ ಮತ್ತು ಜಿಲ್ಲೆಯ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸುವರು. ಸಮಾವೇಶದಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಮುಖಂಡರು ಭಾಗವಹಿಸುವರು. ಈ ಸಂದರ್ಭದಲ್ಲಿ ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಜಿಲ್ಲಾಧ್ಯಕ್ಷ ವಿಜಯಕುಮಾರ್, ನಗರಸಭೆ ಸದಸ್ಯರಾದ ಎಂ.ಎನ್.ಶ್ರೀಧರ್, ನಯೀಂ, ಮುಖಂಡರಾದ ಸುಂಡಹಳ್ಳಿ ಮಂಜುನಾಥ್, ಮುಜಾಯಿದ್, ಸಾತನೂರು ಕೃಷ್ಣ ಹಾಜರಿದ್ದರು.
ನಾಳೆಯಿಂದ ಪ್ರವಾಸ: ಮಂಡ್ಯ, ಮೈಸೂರಿನಲ್ಲಿ ಸಚಿವರ ಪ್ರವಾಸ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜೂ.3 ಮತ್ತು 4ರಂದು ಮಂಡ್ಯ ಹಾಗೂ ಮೈಸೂರಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ. 3ರಂದು ಮಧ್ಯಾಹ್ನ 1ಗಂಟೆಗೆ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಭಾಗಿ, ಮಧ್ಯಾಹ್ನ 3 ಗಂಟೆಗೆ ಪ್ರವಾಸಿಮಂದಿರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ಮತ್ತು ಸಾರ್ವಜನಿಕರ ಭೇಟಿ, ಸಂಜೆ 5.30ಕ್ಕೆ ಶ್ರೀರಂಗಪಟ್ಟಣ ಪ್ರವಾಸಿಮಂದಿರಕ್ಕೆ ಭೇಟಿ, ರಾತ್ರಿ 7ಗಂಟೆಗೆ ಮೈಸೂರು ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. 4ರಂದು ಬೆಳಗ್ಗೆ 10ಗಂಟೆಗೆ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಬ್ರಾಹ್ಮಣರ ಸಮುದಾಯ ಭವನಕ್ಕೆ ಭೇಟಿ, 11ಗಂಟೆಗೆ ಜಿಲ್ಲಾಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
63 ಜನರಿಂದ ರಕ್ತದಾನ: ಸಚಿವ ಎನ್.ಚಲುವರಾಯಸ್ವಾಮಿ ಅವರ 63ನೇ ವರ್ಷದ ಜನ್ಮದಿನದ ಅಂಗವಾಗಿ ನಗರದ ಮಹಾರಾಜ ಗ್ರಾೃಂಡ್ ಹೋಟೆಲ್ ಸಮೀಪ ಆಯೋಜಿಸಿದ್ದ ಶಿಬಿರದಲ್ಲಿ ಮಂಡ್ಯ ತಾಲೂಕು ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಸೇರಿದಂತೆ 63 ಜನರು ರಕ್ತದಾನ ಮಾಡಿದರು. ಚಲುವರಾಯಸ್ವಾಮಿ ಹಿತೈಷಿಗಳ ಬಳಗ ಹಾಗೂ ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ಸಂಗ್ರಹಿಸಿದ ರಕ್ತವನ್ನು ಮಿಮ್ಸ್ ರಕ್ತನಿಧಿಗೆ ಹಸ್ತಾಂತರಿಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಕಂಬದಹಳ್ಳಿ ಪುಟ್ಟಸ್ವಾಮಿ, ಸೋಮಶೇಖರ್, ಪೂರ್ಣಿಮಾ, ನಯೀಂ, ಜೀವಧಾರೆ ನಟರಾಜು, ನವೀನ್‌ಕುಮಾರ್ ಇತರರಿದ್ದರು. ಇದಕ್ಕೂ ಮುನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸೇವಾಕಿರಣ ವೃದ್ಧಾಶ್ರಮದಲ್ಲಿ ಬಟ್ಟೆ ವಿತರಿಸಲಾಯಿತು.