

ಮಂಡ್ಯ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಗಮದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲಾಗುವುದು. ವಾಸ್ತವವಾಗಿ ನಮ್ಮಲ್ಲಿ ನೀರಿಲ್ಲ, ಹಾಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರದ ಮುಂದೆ ನೀರಿನ ಕೊರತೆ ಬಗ್ಗೆ ಹೇಳಿದ್ದೇವೆ. ಶೀಘ್ರದಲ್ಲಿ ಮತ್ತೆ ಸಭೆ ನಡೆಯಲಿದ್ದು, ಅಲ್ಲಿಯೂ ಸಮರ್ಥ ವಾದ ಮಾಡಲಿದ್ದೇವೆ. ಸಮಿತಿಯ ಆದೇಶ ವಾಪಾಸ್ ಪಡೆಯಲು ಆಗ್ರಹಿಸಲಾಗುವುದು. ನಮ್ಮಲ್ಲಿ ಬೆಳೆಗಳು ಹಾಳಾಗುತ್ತಿವೆ, ಮಳೆ ಬರದಿದ್ದರೆ ಕುಡಿಯುವ ನೀರಿಗೂ ತೊಂದರೆ ಆಗಲಿದೆ ಎಂದರು.
ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋರ್ಟಿಗೂ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುತ್ತೇವೆ. ಪ್ರಾಧಿಕಾರ ವಾಸ್ತವ ಸ್ಥಿತಿ ಗಮನಿಸಿ ಆದೇಶ ನೀಡುವ ವಿಶ್ವಾಸವಿದೆ. ಮುಂದಿನ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಅವಾಗ 10-12 ಟಿಎಂಸಿ ನೀರು ಶೇಖರಣೆಯಾದರೆ ಎಲ್ಲರಿಗೂ ಒಳ್ಳೆಯದಾಗಲಿದೆ. ಕಷ್ಟ ಹೇಳಿ ಕೊಳ್ಳಬಹುದು. ಆದರೆ ಸರ್ವೋಚ್ಚ ನ್ಯಾಯಾಲಯದ ತಿರಸ್ಕರಿಸಲಾಗಲ್ಲ. ಆದರೆ ನಮ್ಮ ರೈತರಿಗೆ ಒಳಿತಾಗಲೂ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಮಳೆ ಕೊರತೆ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಅವರು ಅನುಭವಸ್ಥರು. ಆದ್ದರಿಂದ ಅವರು ಮುಂಚೆಯೇ ಹೇಳಿದಿದ್ದರೆ ಸಲಹೆ ತೆಗೆದುಕೊಳುತ್ತಿದ್ದೆವು. ಹಾಗಾಗಿ ಮುಂದಿನ ಬಾರಿ ಅವರ ಸಲಹೆ ತೆಗೆದುಕೊಳ್ಳುತ್ತೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಬೆಂಗಳೂರಲ್ಲಿ ನಡೆದ ಸರ್ವ ಪಕ್ಷ ಸಭೆಗೆ ಬಂದಿಲ್ಲ. ಇದು ಏನರ್ಥ, ವಾಸ್ತವ ಸತ್ಯ ಚರ್ಚೆಗೆ ಅವರು ಸಿದ್ಧವಿಲ್ಲ. ಆದ್ದರಿಂದ ಅವರು ಪಾದಯಾತ್ರೆ ಮಾಡಿದರೆ ಪ್ರಯೋಜನ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ಅವರಿಗೆ ಟಾಟಾನೂ ಮಾಡಿಲ್ಲ. ಭೇಟಿಗೆ ಅವಕಾಶ ಕೊಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಬಿಜೆಪಿ ಅವರಿಗೆ ಮೋದಿ ಕಂಡರೆ ಭಯ ಇದೆ. ಈ ಕಾರಣಕ್ಕೆ ಪ್ರಧಾನಿ ಬಳಿ ನಿಯೋಗ ಕರೆದೊಯ್ಯಲು ಅವರಿಗೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ 161 ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಸಂಗ್ರಹಿಸುವುದರ ಜತೆಗೆ ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಘೋಷಣೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇವೆ. ಬರ ತಾಲೂಕುಗಳಲ್ಲಿ ಅಧ್ಯಯನ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.