ನಮ್ಮದು ಒರಿಜಿನಲ್ ಸರ್ಕಾರ: ಬಿಜೆಪಿ, ಜೆಡಿಎಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್

Minister Chaluvarayaswamy's criticism against BJP and JDS Mandya
Published on

ಮಂಡ್ಯ: ಬಿಜೆಪಿ ಮತ್ತು ಜೆಡಿಎಸ್ ಅವರದು ಸಾಂದರ್ಭಿಕ ಶಿಶುವಿನಂತ ಸರ್ಕಾರ. ಆದರೆ ನಮ್ಮದು ಒರಿಜಿನಲ್ ಸರ್ಕಾರ. 136 ಸೀಟ್‌ಗಳು ಜನರು ಆಶೀರ್ವಾದ ಮಾಡಿದ್ದಾರೆ. ಇದನ್ನು ಅವರು ಸಹಿಸಿಕೊಳ್ಳುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಆ.6ರಂದು ನಗರದ ಫ್ಯಾಕ್ಟರಿ ವೃತ್ತದ ಸಮೀಪ ನಡೆಯುವ ಕಾಂಗ್ರೆಸ್ ಜನಾಂದೋಲನ ಸಮಾವೇಶದ ಸ್ಥಳವನ್ನು ಸೋಮವಾರ ಪರಿಶೀಲಿಸಿ ಮಾತನಾಡಿದ ಅವರು, ಜನರು ನಮಗೆ ಸಂಪೂರ್ಣವಾಗಿ ಆಶೀರ್ವಾದ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿ ಮತ್ತು ಜೆಡಿಎಸ್ ಅವರಿಗೆ ಹೊಟ್ಟೆ ನೋವು. ಅದರಿಂದ ಸಿಎಂ ರಾಜೀನಾಮೆಗೆ ವಿಪಕ್ಷಗಳ ಒತ್ತಾಯ ಮಾಡುತ್ತಿದ್ದಾರೆ. ಅವರು ಸರ್ಕಾರವೇ ಬೇಡ ಎನ್ನುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಜೆಡಿಎಸ್ ಮತ್ತು ಬಿಜೆಪಿ ಬೆಲೆ ಕೊಡುತ್ತಿಲ್ಲ ಎಂದು ಟೀಕಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಲಗೆ ಹಿಡಿತವಿಲ್ಲದೇ ಮಾತಾಡುತ್ತಿದ್ದಾರೆ. ಒಂದು ಸರ್ಕಾರವನ್ನು ತೆಗೆಯುತ್ತೇವೆ ಎನ್ನುವುದೇ ದೊಡ್ಡ ಅಪರಾಧ. ಈ ಆಧಾರದ ಮೇಲೆ ಅವರ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಬೇಕು. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಸರ್ಕಾರ ತೆಗೆಯುತ್ತೇನೆ ಎನ್ನುವವರು ಪ್ರಜಾಪ್ರಭುತ್ವಕ್ಕೆ ಹೇಗೆ ಗೌರವ ಕೊಡುತ್ತಾರೆ. ಇವರು ಇದ್ದಾಗ ಸರ್ಕಾರ ಇರಬೇಕು, ಬೇರೆ ಅವರು ಇದ್ದಾಗ ಇರಬಾರದಾ?. ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಹೀಂ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net