ನೀರಿನ ವಿಚಾರದಲ್ಲಿ ರಾಜಕಾರಣವಿಲ್ಲಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

1 (4)
Published on

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಸಹ ಒಗ್ಗೂಡಿ ರೈತರ ರಕ್ಷಣೆಗೆ ಮುಂದಾಗಬೇಕಾಗಿದೆ. ಅಂತೆಯೇ ಹೋರಾಟದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುತ್ತಿದ್ದು,ನಾಡಿನ ರೈತರಿಗೆ ಒಳಿತಾಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಮಗೆ ರೈತರ ಹಿತರಕ್ಷಣೆ ಮುಖ್ಯ. ತ.ನಾಡು ಪ್ರತಿನಿತ್ಯ 25,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರ ಮತ್ತು ನ್ಯಾಯಾಲಯದ ಮೊರೆ ಹೋಗಿದ್ದು, ರಾಜ್ಯ ಸರ್ಕಾರ ಇಲ್ಲಿನ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಬಂದಿದೆ. ಇದರಿಂದಾಗಿ ನೀರು ಬಿಡುವ ಪ್ರಮಾಣ ಕಡಿಮೆಯಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆ ಸಮರ್ಥ ವಾದ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿಶೇಷ ಕಾಳಜಿ ವಹಿಸಿ ಕಾನೂನು ತಜ್ಞರ ಜತೆ ನಡೆಸಿದ್ದಾರೆ ಎಂದರು.

ಸುಪ್ರೀಂ ಕೋರ್ಟಿನ ತೀರ್ಪು ಹೊರ ಬಂದ ನಂತರ ಅನುಕೂಲ ಮತ್ತು ಅನಾನುಕೂಲ ಬಗ್ಗೆ ಸರ್ಕಾರದ ನಿಲುವು ಏನಿರಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ರೈತರ ಹಿತ ಕಾಪಾಡಲು ಸರ್ಕಾರ ಎಲ್ಲ ರೀತಿಯಲ್ಲಿಯೂ ಮುಂದಾಗಿದೆ. ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಅಂತೆಯೇ ಸರ್ವ ಪಕ್ಷ ನಿಯೋಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಮಯಾವಕಾಶ ಕೋರಿದ್ದೇವೆ. ಆದರೆ ಅವರು ಇದುವರೆಗೆ ಸಮಯ ನಿಗದಿ ಮಾಡಿಲ್ಲ. ಕಾವೇರಿ ನದಿ ನೀರು ಪ್ರಾಧಿಕಾರ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಣೆ ಮಾಡುತ್ತಿದ್ದು, ಹಾಗಾಗಿ ಪ್ರಧಾನಿ ಅವರ ಭೇಟಿ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ರಾಜ್ಯದ 28 ಜನ ಸಂಸದರು, ರಾಜ್ಯಸಭಾ ಸದಸ್ಯರು ಕಾವೇರಿ ವಿಚಾರದಲ್ಲಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಪರ್ಕ ಕೊಂಡಿಯಾಗಿ ಸಂಸದರು ಕಾರ್ಯನಿರ್ವಹಿಸಬೇಕು. ಕಾವೇರಿ ನೀರು ಸಮಸ್ಯೆ ವಿಚಾರದಲ್ಲಿ ಸಂಸದರಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಅವರು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ನಡೆಸುತ್ತಿರುವ ಹೋರಾಟದಲ್ಲಿ ನ್ಯಾಯಯುತ ಬೇಡಿಕೆ ಮುಂದಿಟ್ಟು ಪ್ರತಿಭಟಿಸಲಾಗುತ್ತಿದೆ. ಈ ವೇಳೆ ಯಾರನ್ನು ಸಹ ಟೀಕೆ ಮಾಡದೆ ಹೋರಾಟ ಮುಂದುವರೆಸಿರುವುದು ಒಳ್ಳೆಯ ಬೆಳವಣಿಗೆ. ನಾವು ಕೂಡ ಹಿಂದೆ ಕಾವೇರಿ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದೆವು. ಇದೀಗ ಮಂತ್ರಿಯಾಗಿದ್ದೇನೆ. ರಾಜ್ಯವನ್ನಾಳಿದ ಎಲ್ಲ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಸಮಸ್ಯೆಯನ್ನು ಎದುರಿಸಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿಗೆ ಸ್ಪಂದಿಸಬೇಕಾಗಿದೆ.ಸರ್ಕಾರ ರೈತರ ಹಿತ ಕಾಪಾಡಲು ಬದ್ಧವಾಗಿದೆ. ಕೆಆರ್‌ಎಸ್ ಜಲಾಶಯದಿಂದ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ಎರಡನೇ ಕಂತಿನ ನೀರು ಹರಿಸಲಾಗುವುದು ಎಂದು ಹೇಳಿದರು.

ಹಿತ ರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ರೈತರಿಂದ ಮತ ಪಡೆದು ಚುನಾಯಿತರಾಗಿರುವ ಸಂಸದರಿಗೆ ಮನವಿ ಮಾಡುವುದು ಸರಿಯಲ್ಲ. ಬದಲಿಗೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲುವುದು ಅವರ ಕರ್ತವ್ಯ. ರೈತರು ಬೆಳೆದಿರುವ ಬೆಳೆಗೆ ನೀರಿಲ್ಲ. ಹೊಸ ಬೆಳೆ ಹಾಕಲು ಸಾಧ್ಯವಾಗುತ್ತಿಲ್ಲ. ಇದೊಂದೇ ಬೆಳೆಯಲ್ಲ ಮುಂದಿನ ಎರಡು ವರ್ಷ ರೈತನಿಗೆ ಬೆಳೆ ಹಾಕುವುದು ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ರೈತನ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಆದ್ದರಿಂದ ಸರ್ಕಾರ ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಎನ್.ಯತೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಎಂ.ಎಸ್.ಚಿದಂಬರ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net