ಕರ್ನಾಟಕದಲ್ಲೇ ಯಂತ್ರೋಪಕರಣ ಉತ್ಪಾದನೆ ಆರಂಭಿಸಿ: ಪ್ರತಿಷ್ಠಿತ ಕಂಪನಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಆಹ್ವಾನ

Minister Chaluvarayaswamy visited Krishi Mela in America Mandya
Published on

ಮಂಡ್ಯ: ವಿಭಿನ್ನ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಹಲವು ಬೆಳೆಗಳ ಬಿತ್ತನೆ, ನಿರ್ವಹಣೆ ಕಟಾವಿಗೂ ನೆರವಾಗುವ ಹೊಸ ಯಂತ್ರಗಳು ಆವಿಷ್ಕಾರಗೊಂಡಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಯಂತ್ರಗಳ ಉತ್ಪಾದನಾ ಘಟಕ ಪ್ರಾರಂಭಿಸಿದರೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿರುವ ಸಚಿವ ಚಲುವರಾಯಸ್ವಾಮಿ, ಅಯೋವಾ ಪ್ರಾಂತ್ಯದ ಬೊನೆ ನಗರದಲ್ಲಿ ನಡೆಯುತ್ತಿರುವ ಅತ್ಯಾಧುನಿಕ ಕೃಷಿ ಯಂತ್ರಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ವೀಕ್ಷಿಸಿ ಮತ್ತು ಮೆಸ್ಸೆ ಫರ್ಗೂಸನ್, ಜಾನ್‌ಡೀರ್, ಕುಬೋಟಾ, ಅಗ್ರಿ ಏರೋ ಸ್ಪೇಸ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ.

ರಾಜ್ಯದಲ್ಲಿ ಕೃಷಿಯನ್ನು ಸುಸ್ಥಿರ ಹಾಗೂ ಲಾಭದಾಯಕವನ್ನಾಗಿಸಬೇಕಿದೆ. ಶ್ರಮ ಮತ್ತು ವೆಚ್ಚ ಕಡಿತಗೊಳಿಸಿ ಉತ್ಪಾದನೆ ಹೆಚ್ಚಿಸಲು ಇಂತಹ ಆಧುನಿಕ ಯಂತ್ರೋಪಕರಣಗಳ ಬಳಗೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಹೊಸ ಯಂತ್ರಗಳು ಆವಿಷ್ಕಾರ ರೈತರ ನೆರವಿಗೆ ಬರಲಿದೆ. ಆದ್ದರಿಂದ ದೊಡ್ಡ ಯಂತ್ರಗಳನ್ನು ಉತ್ಪಾದನೆ ಘಟಕ ಮಾಡಲು ಅಗತ್ಯವಿರುವ ಸೌಕರ್ಯ ಕಲ್ಪಿಸಿಕೊಡಲಾಗುವುದು ಎಂದಿದ್ದಾರೆ.
ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್, ಅಪರ ಕೃಷಿ ನಿರ್ದೇಶಕ ವೆಂಕಟರಮಣ ರೆಡ್ಡಿ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ಅಧ್ಯಕ್ಷ ಹರೀಶ್, ವ್ಯವಸ್ಥಾಪಕ ನಿರ್ದೇಶಕ ಬಂಥನಾಳ್, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಇದ್ದರು.
ಬೊನೆ ನಗರದಲ್ಲಿ ಏರ್ಪಡಿಸಿರುವ ಮೇಳ ವಿಶ್ವದ ಅತೀ ದೊಡ್ಡ ಕೃಷಿ ಪ್ರದರ್ಶನವಾಗಿದೆ. ವಿಶ್ವದ ಅನೇಕ ಕೃಷಿ ಯಂತ್ರೋಪಕರಣಗಳ ಉತ್ಪಾದನಾ ಸಂಸ್ಥೆಗಳು ಇದರಲ್ಲಿ ಭಾಗವಹಿಸುತ್ತವೆ. ಪ್ರತಿ ವರ್ಷ ಹೊಸ ಆವಿಷ್ಕಾರಗಳು ಇಲ್ಲಿ ಪರಿಚಯಿಸಲ್ಪಡುತ್ತವೆ. ಅದರಂತೆ ಪ್ರಮುಖವಾಗಿ ರೋಬೋಟಿಕ್ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆಯಿಂದ ಚಲಿಸಲ್ಪಡುವ ಯಂತ್ರಗಳ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳು ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net