

ಮಂಡ್ಯ: ಮೈಕ್ರೋಫೈನಾನ್ಸ್ ಕಿರುಕುಳದ ಸಂಬಂಧ ಕಠಿಣ ಕಾನೂನು ಕ್ರಮಕ್ಕೆ ಚಿಂತನೆ ಆಗಿದೆ. ಬಡ್ಡಿ, ಸುಸ್ತಿಬಡ್ಡಿ ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಅದೇ ರೀತಿ ಮಂಡ್ಯದಲ್ಲೂ ಈ ಬಗ್ಗೆ ಎಸ್ಪಿಗೆ ನಿರ್ದೇಶನ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋಫೈನಾನ್ಸ್ ಬಗ್ಗೆ ಜನರು ಸಹ ಜಾಗೃತರಾಗಬೇಕು. ನಾವು ಬಡ್ಡಿ ರಹಿತ ಸಾಲ ನೀಡುತ್ತಿದ್ದೇವೆ. ಪಿಎಲ್‌ಡಿ ಬ್ಯಾಂಕ್, ಸೊಸೈಟಿ, ಇತರೆ ಬ್ಯಾಂಕ್‌ಗಳ ಮೂಲಕ ಸಾಲ ತೆಗೆದುಕೊಳ್ಳಬಹುದು. ಮೈಕ್ರೋಫೈನಾನ್ಸ್‌ಗೆ ಹೋಗುವುದನ್ನು ಜನರು ನಿಲ್ಲಿಸಬೇಕು. ಮೈಕ್ರೋಫೈನಾನ್ಸ್‌ನಲ್ಲಿ ದಾಖಲೆ ಇಲ್ಲದೇ ಬೇಗ ಸಾಲ ಸಿಗಲಿದೆ ಎಂದು ಜನರು ಹೋಗುತ್ತಾರೆ. ದಾಖಲೆಗಳು ಬೇಕಿಲ್ಲವೆಂದು ಹೋದರೆ ಒಂದಕ್ಕೆ ಎರಡರಷ್ಟು ಬಡ್ಡಿ ಹಾಕಿ ಜನಕ್ಕೆ ತೊಂದರೆ ಕೊಡುತ್ತಾರೆ ಎಂದರು.
ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಬೆಂಬಲಿತ ಸಹಕಾರ ಸಂಘ ಸದಸ್ಯರ ಅನರ್ಹ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಅಧಿಕಾರದಲ್ಲಿ ಇಲ್ಲದಿದ್ದಾಗ ಡಿಸಿಸಿ ಬ್ಯಾಂಕ್‌ನಲ್ಲಿ 9 ಸೀಟ್ ಗೆದ್ದಿದ್ದೋ. ಆಗ ಜೆಡಿಎಸ್ ಅವರು 4 ಸೀಟ್ ಗೆದ್ದಿದ್ದರು. ಅಧ್ಯಕ್ಷರ ಚುನಾವಣೆ ದಿನ ನಮ್ಮ 4 ಜನರನ್ನು 24 ಗಂಟೆ ಅನರ್ಹ ಮಾಡಿದ್ದರು. ಸಿ.ಎಸ್.ಪುಟ್ಟರಾಜು ಪಾಪ ಬಹಳ ಬುದ್ದಿವಂತ. ಅಯ್ಯಯ್ಯ ಪಾಪ ಪುಟ್ಟರಾಜು ಯಜಮಾನ ಹತ್ತಿರ ಕಲಿಬೇಕು ನಾನು. ಅವತ್ತು ಏನು ಮಾಡಿದ್ದರು. ಸಹಕಾರ ಇಲಾಖೆಯಲ್ಲಿ ನಾವು ಅವರಷ್ಟು ಕೆಳಗೆ ಇಳಿದು ಚುನಾವಣೆ ಮಾಡಲ್ಲ. ಇವತ್ತು ಸಹ ಅವರ ನಾಲ್ಕು ಜನ ಅಭ್ಯರ್ಥಿಗಳದ್ದು ಸ್ಟೇ ಇದೆ. ಸ್ಟೇ ತೆಗೆದರೆ ಅವರು ಅಭ್ಯರ್ಥಿಗಳೇ ಆಗುವಂತಿಲ್ಲ. ನಾವು ಅಂತದಕ್ಕೆ ಕೈ ಹಾಕಿಲ್ಲ. ಸೂಪರ್‌ಸೀಡ್ ಆಗುವ ಸೊಸೈಟಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಡಿ ಎನ್ನುವುದಕ್ಕೆ ಆಗುತ್ತಾ. ಕಾನೂನು ಬಾಹಿರ ಸೊಸೈಟಿಗಳ ವಿರುದ್ಧ ಕ್ರಮ ಆಗಲಿದೆ ಎಂದು ಹೇಳಿದರು.
ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾರ್ಲಿಮೆಂಟ್ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬರುತ್ತಾರೆಂದು ಚರ್ಚೆಯಾಗಿತ್ತು. ಆಗ ಅವರು ಬರಲಿಲ್ಲ. ಈಗ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಸ್ವಾಗತ. ನಮ್ಮ ಸಿದ್ದಾಂತ ಒಪ್ಪಿ ಕಾಂಗ್ರೆಸ್‌ಗೆ ಯಾರು ಬಂದರೂ ಸಂತೋಷ. ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಅವರದು ವೈಯಕ್ತಿಕ ವಿಚಾರ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಪಕ್ಷಕ್ಕೆ ಬಂದರೆ ಅಭ್ಯಂತರವಿಲ್ಲ. ಅದರ ತೀರ್ಮಾನವನ್ನು ಸಿಎಂ, ಅಧ್ಯಕ್ಷರು, ಹೈಕಮಾಂಡ್ ಮಾಡಲಿದೆ. ಒಂದಷ್ಟು ಜನ ಶಾಸಕರು ಬರುತ್ತಾರೆಂದು ಹೇಳಲಾಗುತಿದೆ. ಬಂದರೆ ನಮಗೇನು ಬೇಸರವಿಲ್ಲ. ಅದೇ ರೀತಿ ಬರಲೇಬೇಕೆಂದು ಎಳೆದುಕೊಂಡು ಬರುವ ಪರಿಸ್ಥಿತಿ ನಮಗಿಲ್ಲ. 138 ಶಾಸಕರು ಇರುವುದರಿಂದ ನಮಗೆ ಸಮಸ್ಯೆ ಇಲ್ಲ ಎಂದರು.