

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ಸಧ್ಯದಲ್ಲೇ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲೆ ಆಧುನೀಕರಣ ಕಾಮಗಾರಿ ಮುಗಿಯುವವರೆಗೂ ಕಾಯುವುದಿಲ್ಲ. ಕಾರಣ, ಕೆಲಸ ಪೂರ್ಣಗೊಳ್ಳಲು ಇನ್ನು ಸಮಯಬೇಕು. ಅಣೆಕಟ್ಟೆಗೆ ಇನ್ನೂ ಒಳಹರಿವು ಬರುತ್ತಿಲ್ಲ. ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ, ಮಳೆ ಬರಲಿದೆ. ನೀರು ಬಿಡಲು ಏನು ಸಮಸ್ಯೆಯಿಲ್ಲ. ವ್ಯವಸಾಯಕ್ಕೆ ನೀರು ಕೊಡುವ ಬಗ್ಗೆ ತೀರ್ಮಾನ ಮಾಡಲು ಆಗಲ್ಲ. ಮಡಿಕೇರಿ ಕಡೆ ಮಳೆಯಾದರೆ ನೀರು ಬರಲಿದೆ. ಜುಲೈ ಒಳಗೆ 110 ಅಡಿ ಬಂದರೆ ಅನುಕೂಲ ಆಗಲಿದೆ. ಸಭೆ ಮಾಡಿ ನೀರು ಹರಿಸಲಾಗುವುದು ಎಂದು ವಿವರಿಸಿದರು.
ಮದ್ದೂರು ಶಾಸಕ ಕೆ.ಎಂ.ಉದಯ್ ಗನ್‌ಮ್ಯಾನ್ ಮೇಲೆ ನಟ ದರ್ಶನ್ ಬೆಂಬಲಿಗರದಿಂದ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯಿಸಿ, ದೂರು ನೀಡಿದರೆ ಆ ಬಗ್ಗೆ ಪೊಲೀಸರು ಕ್ರಮ ವಹಿಸುತ್ತಾರೆ ಎಂದಷ್ಟೇ ಪ್ರತಿಕ್ರಿಯಿಸಿದರು. ನಂತರ ದೇವದಾರಿ ಹಿಲ್ಸ್‌ನಲ್ಲಿ ಗಣಿಗಾರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಈ ಹಿಂದೆ ಕುಮಾರಸ್ವಾಮಿ ಸಿಎಂ ಆದಾಗ ಗಣಿಗಾರಿಕೆ ಬೇಡ ಎಂದಿದ್ದರು. ನೋಡೋಣಾ, ಸಾರ್ವಜನಿಕರ ಗಮನದಲ್ಲಿ ಇಟ್ಟುಕೊಂಡು ಮಾಡಬೇಕು. ರಾಜ್ಯಕ್ಕೆ ಕುಮಾರಸ್ವಾಮಿ ಒಳ್ಳೆಯದನ್ನು ಮಾಡಲಿ. ಅದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದರು.
ಎಂಎಲ್‌ಸಿ ಸೂರಜ್ ರೇವಣ್ಣ ಬಂಧನಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಕೋರ್ಟ್ ಇದೆ. ಇದು ಬಹಿರಂಗವಾಗಿ ಚರ್ಚೆ ಮಾಡುವ ವಿಚಾರವಲ್ಲ. ನಮಗೂ ಇದರ ಬಗ್ಗೆ ಮುಜುಗರ ಇದೆ. ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಸೂರಜ್ ಆರೋಪಿಸಿದ್ದಾರೆ. ಏನು ಮಾಡುವುದು ಇದು ನಮ್ಮ ಕೈಯಲ್ಲಿ ಇದೀಯಾ. ಇದನ್ನ ಸರಿಪಡಿಸುವುದು ನಮ್ಮ ಕೈಯಲ್ಲಿ ಇಲ್ಲ. ಇಬ್ಬರು ದೂರು ನೀಡಿದ್ದಾರೆ. ಆ ಪ್ರಕರಣದ ಬಗ್ಗೆ ತನಿಖೆ ಆಗುತ್ತದೆ. ಕೇಸ್ ಮತ್ತು ಕೌಂಟರ್ ಕೇಸ್ ಆಗಿದೆ. ಇದರಲ್ಲಿ ರಾಜಕೀಯ ಏನು ಬರುತ್ತದೆ. ಅವರ ಮನೆತನವೇ ರಾಜಕಾಣದಲ್ಲಿ ಬೆಳೆದಿದೆ. ಈ ಪರಿಸ್ಥಿತಿಗೆ ನಿರ್ಮಾಣಕ್ಕೆ ಅವರೇ ಕಾರಣ. ನಾವು ಏನು ಮಾಡಲು ಸಾಧ್ಯ ಎಂದು ಹೇಳಿದರು.
ಇತ್ತೀಚಿನ ದಿನದಲ್ಲಿ ಪೆನ್‌ಡ್ರೈವ್ ಸದ್ದು ಮಾಡುತ್ತಿದೆ. ನಮ್ಮ ಬಳಿ ಪೆನ್‌ಡ್ರೈವ್ ಇದೆ ಎಂದು ಹೇಳಿದ್ದೇವೆಯೇ?. ಬಡವರ ಮಕ್ಕಳು ಇರಬಾರದಾ?. ಬೇರೆ ಪಕ್ಷದಲ್ಲಿ ಇದ್ದರೂ ಇವತ್ತು ದೇವೇಗೌಡರನ್ನ ನಮ್ಮ ನಾಯಕರು ಎನ್ನುತ್ತೇವೆ. ಆದ್ದರಿಂದ ವೈಯಕ್ತಿಕ ಟೀಕೆ ಟಿಪ್ಪಣಿ ಕಡಿಮೆ ಮಾಡಿ ಅಭಿವೃದ್ಧಿ ಕಡೆಗೆ ಗಮನಹರಿಸಲಿ. ಇನ್ನು ಮೂರು ಡಿಸಿಎಂ ವಿಚಾರ ಚರ್ಚೆಯಾಗಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಶಿಸ್ತು ಇದೆ. ಸಿಎಂ ಮತ್ತು ಡಿಸಿಎಂ ಒಳ್ಳೆಯ ಕೆಲಸ ಮಾಡಲಿ. ಸಚಿವ ರಾಜಣ್ಣ ಜತೆ ಮಾತನಾಡುತ್ತೇನೆ. ಜಮೀರ್, ರಾಜಣ್ಣ ತುಂಬ ಆತ್ಮೀಯರು. ಏನೇ ಇದ್ದರೂ ವರಿಷ್ಠರ ತೀರ್ಮಾನವೇ ಅಂತಿಮ ಎಂದರು.
ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಬೀಳುತ್ತದೆ ಎಂದು ಕೇಂದ್ರ ಸಚಿವ ಸೋಮಣ್ಣ ಹೇಳಿದ್ದಾರೆ. ಅದಕ್ಕೆ ಸೋಮಣ್ಣ ಕಾಯಲಿ. ಅವರಿಗೆ ರಾಜ್ಯ ಸರ್ಕಾರದ ಮೇಲೆ ಏಕೆ ಪ್ರೀತಿ. ನಾವು 136 ಶಾಸಕರು ಇದ್ದೇವೆ. ಆದರೆ ಕೇಂದ್ರ ಸರ್ಕಾರ ಡೇಂಜರ್‌ನಲ್ಲಿದೆ. ಓವರ್ ಟೇಕ್ ಮಾಡಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಆದ್ದರಿಂದ ಕೆಲಸ ಮಾಡಲಿ ಎಂದ ಸಚಿವ ಚಲುವರಾಯಸ್ವಾಮಿ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಮಾಡುತ್ತೇವೆ. ಸಿ.ಪಿ.ಯೋಗೇಶ್ವರ್ ಬಹಳ ಎತ್ತರ ಬೆಳೆದಿದ್ದಾರೆ. ಅವರಿಗಿಂತ ಕುಮಾರಸ್ವಾಮಿ ಎತ್ತರದಲ್ಲಿ ಇದ್ದಾರೆ. ಇಬ್ಬರು ಒಟ್ಟಿಗೆ ಸೇರಿದ್ದಾರೆ. ನಾವು ತೊಡೆತಟ್ಟಲು ಆಗುವುದಿಲ್ಲ. ಆ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ. ನಮ್ಮ ಸರ್ಕಾರದ ಅಭಿವೃದ್ಧಿ ಜನರ ಮುಂದೆ ಇಡುತ್ತೇವೆ ಎಂದು ಪ್ರತಿಕ್ರಿಯಿಸಿದರು.