ನಾಸೀರ್ ಹುಸೇನ್ ಪ್ರಮಾಣವಚನ ಸ್ವೀಕರಿಸಲು ಅವಕಾಶ ಕೊಡದಂತೆ ದೂರು: ಉಪರಾಷ್ಟ್ರಪತಿಗಳೇ ತೀರ್ಮಾನ ಮಾಡ್ತಾರೆಂದ ಸಚಿವ

Minister Cheluvarayaswami
Published on

ಮಂಡ್ಯ: ಪಾಕ್ ಪರ ಘೋಷಣೆ ಆರೋಪ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರಮಾಣವಚನ ಸ್ವೀಕರಿಸಲು ಅವಕಾಶ ಕೊಡದಂತೆ ಉಪರಾಷ್ಟ್ರಪತಿಗೆ ದೂರು ಸಲ್ಲಿಕೆಯಾಗಿದ್ದರೆ, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ವಿಚಾರ ಕುರಿತು ಬೇರೆ ಸಚಿವರು ಹೇಳಿಕೆ ಕೊಟ್ಟಿದ್ದರೆ ಅವರನ್ನೇ ಕೇಳಿ ಎಂದರು.

ಹಣ ಕೊಟ್ಟವರಿಗೆ ಮಣೆ ಹಾಕುವ ಸಂಸ್ಕೃತಿ ಕಾಂಗ್ರೆಸ್‌ನಲ್ಲಿದೆ ಎನ್ನುವ ಸಂಸದೆ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ. ಒಂದು ಪಕ್ಷದ ಆಕಾಂಕ್ಷಿಯಾಗಿ ಇನ್ನೊಂದು ಪಕ್ಷ ಬಗ್ಗೆ ಆರೋಪ ಮಾಡುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಹೈಕಮಾಂಡ್ ಹಾಗೂ ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದರು.

ದಲಿತ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಹೊಸ ಸರ್ಕಾರ ಬಂದಾಗ ಸಿಎಂ ಚರ್ಚೆ ಆಗಬೇಕು, ಈಗ ಅಲ್ಲ. ಆ ಸಂದರ್ಭ ಬಂದಾಗ ಚರ್ಚೆ ಆಗಲಿ. ಎಐಸಿಸಿ ಅಧ್ಯಕ್ಷರೇ ದಲಿತ ಸಮುದಾಯದವರು. ಅವರೇ ಯಾವ ಸಮುದಾಯದವರು ಸಿಎಂ ಆಗಬೇಕೆಂದು ತೀರ್ಮಾನಿಸುತ್ತಾರೆ. ಆದ್ದರಿಂದ ಸಚಿವ ಮಹದೇವಪ್ಪ ಹಿರಿಯರು, ಅವರ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.

ಡಾ.ಎಚ್.ಎನ್.ರವೀಂದ್ರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಸ್ಪರ್ಧೆಗೆ ಟಿಕೆಟ್ ಕೊಡುವುದು ನನ್ನ ವ್ಯಾಪ್ತಿಯಲ್ಲಿಲ್ಲ. ರವೀಂದ್ರ ಆಕಾಂಕ್ಷಿ ಎಂದು ಹಲವಾರು ಬಾರಿ ನಾನೇ ಹೇಳಿದ್ದೇನೆ. ರಾಜಕೀಯದಲ್ಲಿ ಇನ್ನೇನು ಆಗಲ್ಲ. ಅವರು ತಮ್ಮನ ವರ್ಗಾವಣೆಯಾದರೂ ಮಾಡಿ ಎಂದು ಕೇಳಿದ್ದರು, 2 ದಿನಕ್ಕೆ ವರ್ಗಾವಣೆ ಮಾಡಿಕೊಟ್ಟಿದ್ದೇನೆ. ಬೇಸರದಿಂದ ರವೀಂದ್ರ ಮಾತನಾಡಿರುವುದರಿಂದ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಅವರು ನಮ್ಮ ಸ್ನೇಹಿತ, ಅವರ ಇಚ್ಚೆಯಂತೆ ನಡೆದುಕೊಳ್ಳಲಿ ಎಂದ ಚಲುವರಾಯಸ್ವಾಮಿ, ಟ್ರಯಲ್ ಬ್ಲಾಸ್ಟ್‌ಗೆ ಕೋರ್ಟ್ ಆದೇಶ ಇದೆ. ಯಾರಿಗೆ ಆದೇಶ ತಲುಪಿಲ್ಲ, ಅವರಿಗೆಲ್ಲ ಆದೇಶ ಪ್ರತಿ ತಲುಪಿಸೋಣ. ಆದೇಶ ಬಗ್ಗೆ ಗೊತ್ತಿಲ್ಲದೆ ಡಿಸಿ ಮಾತನಾಡುತ್ತಾರಾ?. ಕೋರ್ಟ್ ಆದೇಶ ಇದೆಯೇ, ಏನಂದು ಬಂದಿದೆ ಎಲ್ಲವನ್ನು ಚರ್ಚೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net