

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಉತ್ತರ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ವಿವಿ ಸ್ಥಾಪನೆ ಮಾಡಿದರೆ ಹೊರತು ಕನಿಷ್ಟ ಸಂಬಳ ಕೊಟ್ಟಿಲ್ಲ. ವಿವಿ ಪ್ರಾರಂಭಿಸುವುದು ದೊಡ್ಡಸ್ತಿಕೆ ತೋರುವುದಲ್ಲ. ವಿಲೀನ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಸಂಪರ್ಕದಲ್ಲಿ ಜೆಡಿಎಸ್ ಶಾಸಕರು ಇದ್ದಾರೆಂಬ ಸಚಿವ ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷಕ್ಕೆ ಬಂದರೆ ಬೇಸರವಿಲ್ಲ. ಆದರೆ ನನ್ನ ಸಂಪರ್ಕದಲ್ಲಿ ಯಾರು ಇಲ್ಲ. ಪಕ್ಷದ ಸಿದ್ದಾಂತ ಒಪ್ಪಿ ಬರಲಿ ಎಂದು ಸಿಎಂ, ಅಧ್ಯಕ್ಷರು ಹೇಳಿದ್ದಾರೆ. ಅವರು ಬಂದರೆ ಮಾತ್ರ ಕರೆದುಕೊಳ್ಳುತ್ತೇವೆ ಎಂದು ಹೇಳಿದರು.
ಬೆಳಗಾವಿ ಗಲಾಟೆಗೆ ಸಂಬಂಧಿಸಿದಂತೆ ಮಾ.22ರಂದು ಕರ್ನಾಟಕ ಬಂಗ್‌ಗೆ ಕರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲಿ. ಕನ್ನಡಪರ ಸಂಘಟನೆ ಪ್ರತಿಭಟನೆಗೆ ನಮ್ಮ ವಿರೋದ ಇಲ್ಲ ಎಂದ ಸಚಿವರು, ಪಿಡಬ್ಲುೃಡಿ ಇಲಾಖೆಯಲ್ಲಿ ಗುತ್ತಿಗೆ ಪಡೆಯಲು ಕಮಿಷನ್ ಕೊಡಬೇಕೆನ್ನುವ ಮನ್‌ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು ಆರೋಪಕ್ಕೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ರಾಮಚಂದ್ರ ರಾಜಕಾರಣ ಮಾಡುತ್ತಾರೋ, ಗುತ್ತಿಗೆದಾರನ ಕೆಲಸ ಮಾಡುತ್ತಾರೋ?. ಎರಡೂ ಮಾಡುವುದಕ್ಕೆ ಹೋಗಿ ಈ ರೀತಿಯಾಗಿದೆ. ಪಿಡಬ್ಲುೃಡಿ ಇಲಾಖೆ ಕಾರ್ಯದರ್ಶಿ ಅವರಿಂದಲೇ ತನಿಖೆ ಮಾಡಿಸೋಣ ಎಂದರು.
ಕೇಂದ್ರ ಗೃಹಸಚಿವ ಅಮಿತ್ ಷಾ ಜತೆ ಡಿಸಿಎಂ ಡಿಕೆಶಿ ವೇದಿಕೆ ಹಂಚಿಕೊಂಡ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಚಲುವರಾಯಸ್ವಾಮಿ, ನನಗೆ ಕೃಷಿ ಇಲಾಖೆ ಹಾಗೂ ಮಂಡ್ಯ ಜಿಲ್ಲೆ ಬಗ್ಗೆ ಮಾತ್ರ ಕೇಳಿ. ಉಳಿದಿದನ್ನು ಮಾತನಾಡುವುದಕ್ಕೆ ನಮ್ಮ ಪಕ್ಷ ಇದೆ. ನಾನು ಇದಕ್ಕೆ ಪ್ರತಿಕ್ರಿಯೆ ನೀಡಲ್ಲ. ಬಿಜೆಪಿಯವರ ಮಾತು ಕೇಳಿ ತೀರ್ಮಾನ ತೆಗೆದುಕೊಳ್ಳುವ ದಡ್ಡರಿಲ್ಲ. ಬಿಜೆಪಿಯವರಿಗೆ ನಾಯಕತ್ವ ಇಲ್ಲ. ಅವರು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಭದ್ರವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಸಿಎಂ ಸ್ಥಾನಕ್ಕಾಗಿ ಡಿಕೆಶಿ ಬಿಜೆಪಿ ಸೇರುವುದಾಗಿ ಬೆದರಿಕೆ ಹಾಕ್ತಿದ್ದಾರೆ ಎಂಬ ಶಾಸಕ ಮುನಿರತ್ನ ಹೇಳಿಕೆಗೆ ವ್ಯಂಗ್ಯವಾಡಿದ ಸಿಆರ್‌ಎಸ್, ಮುನಿರತ್ನ ಕೇಸ್ ಎದುರಿಸುತ್ತಿದ್ದಾರೆ. ಜೈಲಿಂದ ಹೊರಗೆ ಬಂದಿದ್ದಾರೆ. ಅವರು ಡಿಕೆಶಿ, ಡಿ.ಕೆ.ಸುರೇಶ್ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಅಷ್ಟೆ. ಡಿಕೆಶಿ ಅವರು ಪಕ್ಷದಲ್ಲಿ ಇರುತ್ತಾರೆ. ಅವರು ಪಕ್ಷ ಬಿಟ್ಟು ಹೋಗುವ ಅವಶ್ಯಕತೆ ಏನಿದೆ ಎಂದು ಹೇಳಿದರು.