

ಮಂಡ್ಯ: ಸಚಿವರು, ಶಾಸಕರು ನೀಡುವ ಹೇಳಿಕೆ ಸರಿಯೋ ಅಥವಾ ತಪ್ಪೋ ಎನ್ನುವುದನ್ನು ಹೈಕಮಾಂಡ್ ಗಮನಹರಿಸಲಿದೆ. ಆದ್ದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ರಾಜಣ್ಣ ಹೇಳಿಕೆಗೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ನೋಡುವುದಕ್ಕೆ ಹೈಕಮಾಂಡ್ ಇದೆ. ನನಗೆ ಪಕ್ಷ ಕೃಷಿ ಇಲಾಖೆ ಜವಾಬ್ದಾರಿ ನೀಡಿದೆ. ಮಂಡ್ಯ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಾರೆ. ಸಚಿವರ, ಶಾಸಕರ ಹೇಳಿಕೆಗೆ ಸಂಬಂಧಿಸಿದಂತೆ ನಿಯಂತ್ರಣ ಮಾಡಬೇಕಾ?. ಇಲ್ಲ ಸೂಚನೆ ಕೊಡಬೇಕಾ ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ನಮ್ಮ ಹೈಕಮಾಂಡ್ ಹಾಗೂ ಎಐಸಿಸಿ ಅಧ್ಯಕ್ಷರು ಸಮರ್ಥರಿದ್ದಾರೆ. ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಆದ್ದರಿಂದ ನಾನು ಯಾವುದೇ ವಿಚಾರ ಮಾತನಾಡುವುದಿಲ್ಲ. ರಾಜಣ್ಣ, ಇನ್ನೊಬ್ಬರು ನನ್ನ ಸಹಪಾಠಿಗಳು. ನಾನು ರಾಜಣ್ಣನಿಗಿಂತ ಮೇಲೂ ಇಲ್ಲ, ಕೆಳಗೂ ಇಲ್ಲ. ಪರಮೇಶ್ವರ್, ರಾಜಣ್ಣ, ಸತೀಶ್ ಜಾರಕಿಹೊಳಿ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಕ್ಕೆ ಆಗುತ್ತಾ?. ಅದರ ಬಗ್ಗೆ ಸಿಎಂ, ಡಿಸಿಎಂ, ಎಐಸಿಸಿ ಬಗೆಹರಿಸಲಿದೆ ಎಂದು ಹೇಳಿದರು.
ಹೈಕಮಾಂಡ್ ಭೇಟಿಗೆ ಸಚಿವ ಡಾ.ಜಿ.ಪರಮೇಶ್ವರ್ ದೆಹಲಿಗೆ ಹೊರಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಎಲ್ಲಿಗೆ ಹೋಗುತ್ತಾರೆ, ಎಲ್ಲಿಗೆ ಬರುತ್ತಾರೆ. ಯಾರು ಏನೂ ಮಾಡುತ್ತಾರೆ ಎನ್ನುವುದಕ್ಕೆ ಮಧ್ಯಪ್ರವೇಶ ಮಾಡಲ್ಲ. ಅದು ನನ್ನ ಕೆಲಸವು ಅಲ್ಲ. ಮತ್ತಷ್ಟು ಡಿಸಿಎಂಗೆ ಪಟ್ಟು ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲಪ್ಪ. ಎಲ್ಲವನ್ನೂ ಹೈಕಮಾಂಡ್ ಗಮನಿಸಲಿದೆ. ಅಂತೆಯೇ ಪಕ್ಷಕ್ಕೆ ಮುಜುಗರ ತರಲು ನನಗೆ ಇಷ್ಟ ಇಲ್ಲ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ನವೆಂಬರ್‌ಗೆ ಸಿಎಂ ಬದಲಾವಣೆ ಆಗಲಿದ್ದಾರೆನ್ನುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಎನ್.ಚಲುವರಾಯಸ್ವಾಮಿ, ಮೊದಲು ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಅಶೋಕ್ ತೆಗೆಯಲಿ. ನಮ್ಮ ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ. ಆದರೆ ಬಿಜೆಪಿ ಪಕ್ಷದಲ್ಲಿ ಕೆಲವರು ತೊಡೆ ತಟ್ಟುತ್ತಿದ್ದಾರೆ. ರಾಜ್ಯಾಧ್ಯಕ್ಷನ ತವರಿಂದಲೇ ಫೈಟ್ ಮಾಡುತ್ತೇನೆ, ಮುಟ್ಟಲಿ ನನ್ನ ಎನ್ನುತ್ತಿದ್ದಾರೆ. ಅಶೋಕ್ ಜತೆಯಲ್ಲಿ ಯಾರು ಇಲ್ಲ. ಆದ್ದರಿಂದ ಮೊದಲು ಆ ಸಮಸ್ಯೆಯಿಂದ ಹೊರಬರಲಿ. ಅನೇಕ ಕಾರಣದಿಂದ ಅಶೋಕ್ ಅವರನ್ನ ವಿಪಕ್ಷ ನಾಯಕರನ್ನಾಗಿ ಮಾಡಿದ್ದಾರೆ. ಅವರ ಪಕ್ಷದ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಅಶೋಕ್‌ಗೆ ಇಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡುವುದು ಅರ್ಥವಿಲ್ಲ ಎಂದ ಅವರು, ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಹೋಗಲಿದೆ. ಪ್ರಜಾಪ್ರಭುತ್ವದಲ್ಲಿ ಕನಿಷ್ಟವಾಗಿ ಮಾತನಾಡುತ್ತಾರೆ. ಆದರೆ ಸರ್ಕಾರಕ್ಕೆ ಡ್ಯಾಮೇಜ್ ಆಗುವ ರೀತಿ ಏನೂ ಆಗಲ್ಲ. ಕರ್ನಾಟಕದ ಸುಪುತ್ರ ಮಲ್ಲಿಕಾರ್ಜುನ ಖರ್ಗೆ ಎಲ್ಲವನ್ನು ಸರಿಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.