

ಮಂಡ್ಯ: ಮಳೆ ಅಭಾವದಿಂದಾಗಿ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವಂತಹ 196 ತಾಲೂಕಿನ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಎಂಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಆಡಳಿತ ಮಂಡಳಿಯಿಂದ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 113 ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ 62 ತಾಲೂಕು ಮಾತ್ರ ಬರಪೀಡಿತ ಪ್ರದೇಶದ ಪಟ್ಟಿಯಲ್ಲಿದ್ದು, ಉಳಿದ 51 ತಾಲೂಕು ಕೇಂದ್ರದ ಮಾರ್ಗಸೂಚಿಗೆ ಒಳಪಟ್ಟಿಲ್ಲ. ಆದ್ದರಿಂದ ಮೊದಲ ಹಂತದ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಈ ಬಗ್ಗೆ ಸೆ.7ರಂದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಬಾಕಿ ಉಳಿದಿರುವ 51 ತಾಲೂಕು ಪಟ್ಟಿಗೆ ಹೊಸದಾಗಿ 83 ತಾಲೂಕುಗಳನ್ನು ಸೇರಿಸಿ 134 ತಾಲೂಕು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶವೆಂದು ಘೋಷಣೆಗೆ ಸಿದ್ದವಾಗಿರುವ 62 ತಾಲೂಕುಗಳನ್ನು ಒಳಗೊಂಡಂತೆ 196 ತಾಲೂಕುಗಳು ನಮ್ಮ ಪ್ರಕಾರ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿವೆ. ಜೂನ್‌ನಲ್ಲಿ ಮಳೆ ಕೊರತೆಯಾಗಿದ್ದರೂ ಜುಲೈನಲ್ಲಿ ಉತ್ತಮವಾಗಿ ಮಳೆ ಸುರಿದಿತ್ತು. ಆದರೆ, ಮತ್ತೆ ಆಗಸ್ಟ್‌ನಲ್ಲಿ ವಾಡಿಕೆಗಿಂತಲೂ ಶೇ.60 ರಿಂದ 70ರಷ್ಟು ಮಳೆ ಕಡಿಮೆಯಾಗಿದೆ. ಒಟ್ಟಾರೆ ಜೂನ್‌ನಿಂದ ಆಗಸ್ಟ್‌ವರೆಗೆ ಸರಾಸರಿ ಶೇ.35ರಷ್ಟು ಮಳೆ ಕೊರತೆಯಿದೆ. ಕೆಲ ದಿನಗಳು ಸುರಿದ ಜೋರು ಮಳೆಯನ್ನೇ ಕೃಷಿಗೆ ಪರಿಗಣಿಸಲಾಗದು. ತಿಂಗಳಿ ಪೂರ್ಣವಾಗಿ ನಿಯಮಿತವಾಗಿ ಮಳೆ ಬಿದ್ದಾಗಷ್ಟೇ ಕೃಷಿಗೆ ಅನುಕೂಲವಾಗುತ್ತದೆ. ಆದ್ದರಿಂದ ಬರ ಸಂಬಂಧ ಕೇಂದ್ರದ ನಿಯಮಾವಳಿಗಳನ್ನು ಸಡಿಲಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
196 ತಾಲೂಕಿನಲ್ಲಿನ ಬರಪರಿಸ್ಥಿತಿ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ವಸ್ತುಸ್ಥಿತಿ ಅಧ್ಯಯನದೊಂದಿಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ. ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಬರುವುದೋ?. ಇಲ್ಲವೋ? ಎನ್ನುವ ಮಾಹಿತಿ ಇಲ್ಲ. ಆದರೆ, ರಾಜ್ಯ ಸರ್ಕಾರ ಆಯಾಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್‌ಗಳ ರಚನೆಗೆ ಶಿಫಾರಸು ಮಾಡಿದೆ. ಅವರು ಕುಡಿಯುವ ನೀರಿನ ಸಮಸ್ಯೆ, ಬೋರ್‌ವೆಲ್‌ಗಳ ಸಮಸ್ಯೆ, ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ, ಖಾಸಗಿ ಬೋರ್‌ವೆಲ್/ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯುವುದು ಸೇರಿದಂತೆ ಸಮಸ್ಯೆ ಬಗೆಹರಿಸಲು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿವರಿಸಿದರು.
ಶಾಸಕ ರವಿಕುಮಾರ್ ಗಣಿಗ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಇದ್ದರು.