ಬಿತ್ತನೆ ಬೀಜ ರಸಗೊಬ್ಬರದ ಕೊರತೆಯಾಗದಿರಲಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

Minister Chaluvarayaswamy meeting Mandya
Published on

ಮಂಡ್ಯ: ಜಂಟಿ ಕೃಷಿ ನಿರ್ದೇಶಕರು ಕೇಂದ್ರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು. ಜತೆಗೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪ್ರಮುಖವಾಗಿ ರೈತ ಸಂಪರ್ಕ ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮು ಪೂರ್ವಸಿದ್ಧತೆ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಹಾಗೂ ವಾಹನಗಳಿಗೆ ವಿಮೆ ಮಾಡಿಸುವ ರೀತಿ ಬೆಳೆ ವಿಮೆ ಮಾಡಿಸುವುದನ್ನು ಸಹ ಪ್ರತಿ ವರ್ಷ ನಿರಂತರವಾಗಿ ಮಾಡಿಸುವುದನ್ನು ರೈತರು ರೂಡಿಸಿಕೊಳ್ಳಬೇಕು. ಬೆಳೆ ವಿಮೆಯಲ್ಲಿ ಶೇ.98ರಷ್ಟನ್ನು ಸರ್ಕಾರ ಹಾಗೂ ಶೇ.2ರಷ್ಟು ಮಾತ್ರ ರೈತರು ಪಾವತಿಸುತ್ತಾರೆ. ಇದರ ಉಪಯುಕ್ತತೆಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಸಾರ್ವಜನಿಕರು ಕಚೇರಿಗೆ ಸಮಸ್ಯೆಗಳೊಂದಿಗೆ ಆಗಮಿಸಿದಾಗ ಅವರಿಗೆ ಸ್ಪಂದಿಸಿ. ಸಾರ್ವಜನಿಕರ ಹೆಸರು, ದೂರವಾಣಿ ಸಂಖ್ಯೆಯನ್ನು ಪಟ್ಟಿ ಮಾಡಿಕೊಳ್ಳಿ. ಕೆಲಸವಾದ ನಂತರ ಅವರಿಗೆ ಕರೆ ಮಾಡಿ ತಿಳಿಸಿ. ಒಂದು ವೇಳೆ ಕಾನೂನು ತೊಡಕಿದ್ದರೆ ಮನವರಿಕೆ ಮಾಡಿ ಕೊಡಿ. ಇದರ ಜತೆಗೆ ಕೈ ಗೊಂಡಿರುವ ಕ್ರಮದ ವರದಿಯನ್ನು ಪ್ರತಿ ಮಾಹೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿ. ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಶಾಸಕರು, ಸಚಿವರ ಕಚೇರಿ ಅಲೆದಾಡುವುದು ತಪ್ಪುತ್ತದೆ ಎಂದರು.

ಬರದ ಹಿನ್ನಲೆ ಜಿಲ್ಲೆಯಲ್ಲಿ 97 ಖಾಸಗಿ ಬೋರ್‌ವೆಲ್ಗಳಿಂದ ಒಪ್ಪಂದ ಮಾಡಿಕೊಂಡು ಕುಡಿಯುವ ನೀರು ಪಡೆಯಲಾಗುತ್ತಿದೆ. ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದು, ಬೋರ್‌ವೆಲ್ಗಳಲ್ಲಿ ನೀರು ಮರುಪೂರಣವಾಗಿರುತ್ತದೆ. ಪರಿಶೀಲನೆ ನಡೆಸಿ ಖಾಸಗಿ ಬೋರ್‌ವೆಲ್ಗಳಿಂದ ನೀರು ಪಡೆಯುತ್ತಿರುವುದನ್ನು ನಿಲ್ಲಿಸಬೇಕು. ಅವಶ್ಯಕತೆ ಇದ್ದ ಕಡೆ ಹೊಸ ಬೋರ್‌ವೆಲ್ ಕೊರೆಯಿಸಿ. ಈ ಹಿಂದೆ ಖಾಸಗಿ ಬೋರ್‌ವೆಲ್ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ಬಿಲ್ ಪಾವತಿಯಾಗಿಲ್ಲ ಎಂದು ದೂರುಗಳು ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸ್ಥಳ ಮಹಜರ್ ಮಾಡಿ ಬಿಲ್ ಪಾವತಿಸಿ. ಏಪ್ರಿಲ್, ಮೇ ಮಾಹೆಯಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಇಲಾಖಾ ಕಾರ್ಯಕ್ರಮಗಳು ಪ್ರಾರಂಭವಾಗಿಲ್ಲ. ಆದ್ದರಿಂದ ಡಿಸೆಂಬರ್ ಅಂತ್ಯದೊಳಗೆ ಶೇ.100 ರಷ್ಟು ಗುರಿ ಸಾಧನೆಯಾಗುವಂತೆ ಯೋಜನೆ ರೂಪಿಸಿ. ಜು.10 ರೊಳಗಾಗಿ ಕಾರ್ಯಕ್ರಮಗಳಿಗೆ ಅವಶ್ಯಕವಿರುವ ಟೆಂಡರ್ ಪ್ರಕ್ರಿಯೆಗಳನ್ನು ಪ್ರಾರಂಭಿಸಿ ಸೂಚನೆ ನೀಡಿದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಮಣ್ಣು ಪರೀಕ್ಷೆ ಆಂದೋಲನ ರೈತರು ಬೆಳೆಯುವ ಬೆಳೆ ಹಾಗೂ ಮಣ್ಣಿಗೆ ನೀಡಬೇಕಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಮಣ್ಣು ಪರೀಕ್ಷೆ ಆಂದೋಲನ ನಡೆಸಬೇಕು. ಒಂದು ತಾಲೂಕನ್ನು ನೋಡಲ್ನಂತೆ ಆಯ್ಕೆ ಮಾಡಿ ಮಣ್ಣನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿ. ಪರೀಕ್ಷೆಯ ನಂತರ ವರದಿ ಹಾಗೂ ಸಲಹೆಗಳನ್ನು ರೈತರ ಮೊಬೈಲ್ ಸಂಖ್ಯೆಗೆ ಒದಗಿಸುವ ರೀತಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸಭೆಗೆ ಪ್ರಸಕ್ತ ಸಾಲಿನ ಮಳೆ ವಿವರ, 2024-25 ನೇ ಸಾಲಿನ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನ ಕೃಷಿ ಬೆಳೆಗಳ ವಿಸ್ತೀರ್ಣದ ಗುರಿ, ಬಿತ್ತನೆ ಪ್ರಗತಿ ಪ್ರಸಕ್ತ ಸಾಲಿನ ಪ್ರಮುಖ ಕೃಷಿ ಬೆಳೆಗಳ ಬಿತ್ತನೆ ಪರಿಸ್ಥಿತಿ, ತಾಲ್ಲೂಕು ವಾರು ಬಿತ್ತನೆ ಬೀಜ ಪರಿಸ್ಥಿತಿ, 2024 ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆವಾರು ಬಿತ್ತನೆ ಬೀಜದ ವಿವರ, ಭತ್ತ ಮತ್ತು ರಾಗಿ ಬಿತ್ತನೆ ಬೀಜಗಳ ಬೇಡಿಕೆ ಮತ್ತು ದಾಸ್ತಾನು ವಿವರ, ರಸಗೊಬ್ಬರ ಬೇಡಿಕೆ ಹಾಗೂ ವಿತರಣೆ ವಿವರ, ಪಿ.ಎಂ ಕಿಸಾನ್ ಯೋಜನೆಯ ಪ್ರಗತಿ ವರದಿ, 2024-25 ನೇ ಪೂರ್ವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ವಿವರ, ಬೆಳೆ ವಿಮೆ ಪ್ರಗತಿ, ವಿಪತ್ತು ನಿರ್ವಹಣೆ, ಮನೆ ಹಾನಿ ಮತ್ತು ಪಾವತಿ ವಿವರಗಳು, ಬೆಳೆ ನಷ್ಟದ ವಿವರಗಳು, , ಪರಿಹಾರ ವಿತರಣೆ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ಉದಯ್, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ವಿವೇಕಾನಂದ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ ಜಾಫರ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net