ದ್ವಿಚಕ್ರ ಗಸ್ತು ವಾಹನಕ್ಕೆ ಹೊಸ ರೂಪ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ

Minister Chaluvarayaswamy drives patrol vehicle Mandya
Published on

ಮಂಡ್ಯ: ನಿರ್ಭಯ ಯೋಜನೆಯಡಿ ಜಿಲ್ಲೆಯಲ್ಲಿ 40 ದ್ವಿಚಕ್ರ ಗಸ್ತು ವಾಹನವನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನಗರದ ಡಿಎಆರ್ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಏಳು ತಾಲೂಕು ಕೇಂದ್ರದಲ್ಲಿ ಮಹಿಳೆಯರ ರಕ್ಷಣೆ ಹಾಗೂ ಅಪರಾಧ ತಡೆ ಸಂಬಂಧ ಈ ವಾಹನ ಕಾರ್ಯ ನಿರ್ವಹಿಸಲಿವೆ. ಶಾಲಾ-ಕಾಲೇಜು ಪ್ರಾರಂಭ ಮತ್ತು ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಕಿರುಕುಳ ಹಾಗೂ ಚುಡಾಯಿಸುವ ಘಟನೆಗಳು ನಡೆಯದಂತೆ ಗಸ್ತು ಮಾಡಿ ರಕ್ಷಣೆ ನೀಡುವುದು. ಮಹಿಳೆಯರು ಹೆಚ್ಚಾಗಿ ಕೆಲಸ ಮಾಡುವ ಸ್ಥಳ, ಫ್ಯಾಕ್ಟರಿ ಹಾಗೂ ಇತರೆ ಸ್ಥಳಗಳ ಕಡೆಗಳಲ್ಲಿ ಗಸ್ತು ಮಾಡಿ ಮಹಿಳೆಯರ ಮುಕ್ತ ಚಲನ ವಲನಕ್ಕೆ ಅನುವು ಮಾಡಿ ಮಾಡಿಕೊಡುವುದು.

ಜನಸಂದಣಿ ಪ್ರದೇಶಗಳಾದ ಬಸ್ ಮತ್ತು ರೈಲ್ವೆ ನಿಲ್ದಾಣ, ಮಾರುಕಟ್ಟೆ, ಸಂತೆ ಕಡೆಗಳಲ್ಲಿ ಗಸ್ತು ಮಾಡಿ ಮಹಿಳೆಯರ ಸರಗಳ್ಳತನ, ಮಹಿಳೆಯರ ಮೇಲೆ ಕಿರುಕುಳ ಹಾಗೂ ದೌರ್ಜನ್ಯ ಪ್ರಕರಣಗಳು ಜರುಗದಂತೆ ಕ್ರಮ ವಹಿಸುವುದು. ಹಬ್ಬ-ಹರಿದಿನ, ಜಾತ್ರೆ, ದೇವಸ್ಥಾನ, ಮಸೀದಿ, ಚರ್ಚ್‌ನಂತಹ ಪ್ರದೇಶಗಳಲ್ಲಿ ಜನಸಂದಣಿ ಸಮಯದಲ್ಲಿ ಹೆಚ್ಚು ಗಸ್ತು ಮಾಡಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮಾಡುವುದು. ಜನನಿಬಿಡ ಸ್ಥಳಗಳಲ್ಲಿ ಗಸ್ತು ಮಾಡಿ ಮಹಿಳೆಯರ ಮತ್ತು ಮಕ್ಕಳ ಸುಗಮ ಸಂಚಾರ ನಿರ್ವಹಣೆ ಸಂಬಂಧ ಕ್ರಮ ವಹಿಸುವುದು. ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ರೌಡಿ, ಸಮಾಜಘಾತುಕರು, ದುಷ್ಕರ್ಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡದಂತೆ ನೋಡಿಕೊಳ್ಳುವುದು.

ಬಸ್‌ಸೌಕರ್ಯಗಳಿಲ್ಲದ ಹಳ್ಳಿ ಕಡೆಗಳಲ್ಲಿ ಮಕ್ಕಳು ಶಾಲೆ-ಕಾಲೇಜಿಗೆ ಹೋಗುವ ಸಲುವಾಗಿ ನಡೆದುಕೊಂಡು ಹೋಗುವ ರಸ್ತೆಯಲ್ಲಿ ಗಸ್ತು ಮಾಡಲು ಬಳಸಲಾಗುವುದು. ಒಟ್ಟಾರೆ ಮಹಿಳೆಯರ ಮತ್ತು ಮಕ್ಕಳ ಸೂಕ್ತ ರಕ್ಷಣೆ ನೀಡಲು ಗಸ್ತು ಕರ್ತವ್ಯಕ್ಕೆ ದ್ವಿಚಕ್ರ ಗಸ್ತು ವಾಹನವನ್ನು ಉಪಯೋಗಿಸಲಾಗುವುದು. ಸಾರ್ವಜನಿಕರು/ಮಹಿಳೆಯರು ತಮ್ಮ ದೂರುಗಳಿದ್ದಲ್ಲಿ ದೂ.ಸಂ 08232-224888 ಗೆ ಅಥವಾ 112 ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಲ್ಲಿ ಮಾಂಡವ್ಯ ರಕ್ಷಣೆಯ ವಾಹನ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ನೆರವು ನೀಡಲಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಈ ಹಿಂದೆ ನೀಡಲಾಗಿದ್ದ ಗಸ್ತು ಬೈಕ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದ ಕಾರಣ ಹೊಸ ರೂಪ ಕೊಡಲಗಿದೆ. ಈ ಮೂಲಕ ಸತತವಾಗಿ ಸಂಚರಿಸಲಿಕ್ಕೆ ಉಪಯೋಗವಾಗುವ ರೀತಿಯಲ್ಲಿ ಸಿದ್ಧಗೊಳಿಸಲಾಗಿದೆ. ಮಹಿಳೆಯರ ರಕ್ಷಣೆ, ಅಪರಾಧ ತಡೆಯುವುದು ಹಾಗೂ ಕಾನೂನು ಸುವ್ಯವಸ್ಥೆಯನ್ನ ಹತೋಟಿಗೆ ತರುವುದು ದ್ವಿಚಕ್ರ ಗಸ್ತು ವಾಹನ ಚಾಲನ ಕಾರ್ಯಕ್ರಮದ ಉದ್ದೇಶವಾಗಿದೆ. ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಅಪರಾಧವನ್ನು ತಡೆಯಲು, ತೊಂದರೆಗೆ ಒಳಗಾದ ಯಾವುದೇ ವ್ಯಕ್ತಿಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದಾಗ ಅವರನ್ನು ರಕ್ಷಣೆ ಮಾಡಲು ಈ ಬೈಕ್ ಸಹಕಾರಿಯಾಗಿದೆ ಎಂದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net