ಬಿಜೆಪಿ, ಜೆಡಿಎಸ್ ನೋಡಿದರೆ ಅಯ್ಯೋ ಎನ್ನಿಸುತ್ತೆ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

Minister N.Cheluvarayaswamy
Published on

ಮಂಡ್ಯ: ನಾನೇನಾದರೂ ದೇವೇಗೌಡರ ಮಗನಾಗಿದ್ದರೆ ಅವರಿಗೆ ನೋವು ಕೊಟ್ಟು ರಾಜಕೀಯ ಮಾಡುತ್ತಿರಲಿಲ್ಲ. ಇವತ್ತೇ ನನ್ನ ರಾಜಕೀಯ ಭವಿಷ್ಯ ಕೊನೆಗೆ ಆಗುತ್ತದೆ ಎಂದಿದ್ದರೂ ದೇವೇಗೌಡರಿಗೆ ನೋವು ಕೊಡುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ಬಿಜೆಪಿ ಜತೆ ಸೇರಲ್ಲವೆಂದು ದೇವೇಗೌಡರು ಅನೇಕ ಬಾರಿ ಹೇಳಿದ್ದರು. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಆದಾಗ್ಯೂ ವಿತ್‌ಔಟ್ ದೇವೇಗೌಡರು ಕುಮಾರಸ್ವಾಮಿ ಏನು ಎಂದು ಪ್ರಶ್ನಿಸಿದರು.

ಬೇರೆ ಯಾರಾದರೂ ತಂದೆ ಬದುಕಿಗಿದ್ದಾಗ ಎರಡು ಬಾರಿ ಮಗ ಸಿಎಂ ಆದ ಇತಿಹಾಸ ಇದಿಯೇ?. ಅಂತಹ ತಂದೆಗೆ ನೋವು ಮಾಡಿ ಅಮಿತ್ ಷಾ ಜತೆ ಸೇರಿದ್ದಾರೆ. ಇದನ್ನ ನೋಡಿದರೆ ಬಿಜೆಪಿ, ಜೆಡಿಎಸ್ ಪರಿಸ್ಥಿತಿ ಏನಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅವರ ಹೀನಾಯ ಪರಿಸ್ಥಿತಿಯಿಂದ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದನ್ನ ಹೇಳಿಕೆ ನೀಡಿ ಪ್ರಚೋದನೆ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಐದು ವರ್ಷ ಇದ್ದೇ ಇರಲಿದೆ. ಒಂದು ಸಣ್ಣ ವ್ಯತ್ಯಾಸ ಆದರೂ ನನ್ನನ್ನ ಪ್ರಶ್ನೆ ಮಾಡಿ. ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಶಕ್ತಿ ಹೀನರಾಗಿದ್ದಾರೆ. ಅವರಿಂದ ಲೋಕಸಭಾ ಚುನಾವಣೆ ಎದುರಿಸಲು ಆಗುತ್ತಿಲ್ಲ. ಎರಡು ಪಕ್ಷದವರನ್ನು ಕಂಡರೆ ನನಗೂ ಅಯ್ಯೋ ಎನಿಸುತ್ತದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರಿಗೆ ಸುಮ್ಮನೆ ಕೂರುವುದಕ್ಕೆ ಆಗದೇ ಕೈ ಪರಚಿಕೊಳ್ಳುತ್ತಿದ್ದಾರೆ. ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಇದ್ದಾರೆ. ರಾಜ್ಯದ ಮುಖಂಡರನ್ನ ಸೌಜನ್ಯಕ್ಕೂ ಮಾತನಾಡಿಸುವುದಕ್ಕೆ ಕೇಂದ್ರ ಬಿಜೆಪಿ ನಾಯಕರು ಸಿದ್ಧರಿಲ್ಲ. 66 ಸ್ಥಾನಕ್ಕೆ ಬಿಜೆಪಿ ಸೀಟು ಕುಸಿದಿರುವುದು ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಷಾಗೆ ಜೀರ್ಣಿಸಿಕೊಳ್ಳಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಇಲ್ಲಿಯವರೆಗೆ ಬರಗಾಲ ಇದೆ, ಕಾವೇರಿ ಸಮಸ್ಯೆ ಇದೆ. ಆದರೆ ರಾಜ್ಯ ಸರ್ಕಾರದ ಜತೆ ಫೈಟ್ ಮಾಡುವುದಕ್ಕೆ ವಿರೋಧ ಪಕ್ಷದ ನಾಯಕ ಇಲ್ಲ. ಅದರಂತೆ ರಾಜ್ಯ ಬಿಜೆಪಿ ನಾಯಕರ ಮೇಲೆ ರಾಷ್ಟ್ರ ನಾಯಕರಿಗೆ ವಿಶ್ವಾಸ ಇಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net