ಮೈತ್ರಿಯಿಂದ ನಮಗೆ ನಷ್ಟವಿಲ್ಲ, ಗ್ಯಾರಂಟಿ ಯೋಜನೆಗಳಿಂದ ವಿಪಕ್ಷಗಳು ವಿಚಲಿತ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Minister Chaluvarayaswamy criticizes BJP, JDS Mandya
Published on

ಮಂಡ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಕಾಂಗ್ರೆಸ್ ಯಾವುದೇ ನಷ್ಟವಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ವಿರುದ್ಧ ಹರಿಹಾಯುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಪರಸ್ಪರ ಅಪ್ಪಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಎರಡು ಪಕ್ಷ ವಿಲೀನವಾದಂತಿದ್ದು, ಘೋಷಣೆ ಮಾಡಬೇಕಿದೆ ಅಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ವಿಷಾದ ವ್ಯಕ್ತಪಡಿಸಿರಬಹುದು. ಆದರೆ ಎಚ್‌ಡಿಕೆ ಮಾತು ಕ್ಷಮಿಸಲಾಗದ ತಪ್ಪು. ಎಚ್‌ಡಿಕೆ ಮಾತನ್ನು ವಿಪಕ್ಷ ನಾಯಕ ಆರ್.ಅಶೋಕ್ ತಪ್ಪಿಲ್ಲವೆನ್ನುವಂತೆ ಹೇಳಿದ್ದಾರೆ. ಇದು ನಿಜಕ್ಕೂ ದುರಂತ. ಅವರೇ ವಿಷಾದ ವ್ಯಕ್ತಪಡಿಸಿದ ಮೇಲೆ ಅಶೋಕ್ ಸಮರ್ಥಿಸಿಕೊಂಡರೆ ಏನರ್ಥ ಎಂದು ವಾಗ್ದಾಳಿ ನಡೆಸಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಯಾವುದೇ ರಾಜ್ಯಗಳು ಇಷ್ಟೊಂದು ಪ್ರಮಾಣದಲ್ಲಿ ಎಲ್ಲ ವರ್ಗಕ್ಕೆ ಸಲ್ಲುವ ಯೋಜನೆ ಜಾರಿಗೊಳಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಮೈತ್ರಿ ಪಕ್ಷದ ನಾಯಕರನ್ನು ವಿಚಲಿತಗೊಳಿಸಿವೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತಷ್ಟು ಗ್ಯಾರಂಟಿ ಯೋಜನೆ ಜಾರಿಯಾಗಿ ಜನರಿಗೆ ಅನುಕೂಲವಾಗಲಿದೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒಕ್ಕಲಿಗ ನಾಯಕರಲ್ಲವೇ, ಅವರೇನು ಬೇರೆ ಸಮುದಾಯದವರೇ?. ಆದಿಚುಂಚನಗಿರಿ ಮಠವನ್ನು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದು ಎಚ್‌ಡಿಕೆ. ನಾವು ಕೂಡ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೇವೆ. ಆದರೆ ಅದನ್ನು ನಾವು ಪ್ರಚಾರ ಮಾಡಲಿಲ್ಲ. ಮೈತ್ರಿ ಪಕ್ಷದವರು ತಾವು ಮಾಡಿರುವ ತಪ್ಪಿಗಾಗಿ ಆದಿಚುಂಚನಗಿರಿ ಧರ್ಮಪೀಠದ ಕ್ಷಮೆ ಯಾಚಿಸಬೇಕು ಒತ್ತಾಯಿಸಿದರು.

ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ, ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಲಿಲ್ಲ. ಇನ್ನು ಸಂಸತ್ ಸದಸ್ಯರಾದರೆ ಪರಿಹಾರ ದೊರಕಲಿದೆಯೇ?. ಕೃಷ್ಣ, ಮಹದಾಯಿ, ಕಾವೇರಿ ವಿಚಾರದಲ್ಲಿ ಇವರು ನಡೆದುಕೊಂಡ ನೀತಿ ಜನತೆಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ನಾಲೆಗೆ ನೀರು ಹರಿಸುವ ವಿಚಾರದಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ಆದರೆ ಪ್ರಸ್ತುತ ನೀರು ಬಿಟ್ಟರೆ ಕೊನೆ ಭಾಗಕ್ಕೆ ತಲುಪುವುದಿಲ್ಲ. ಅಲ್ಲದೆ ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ. ಇನ್ನೊಂದು ವಾರದೊಳಗೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮೇ ಅಂತ್ಯದೊಳಗೆ ನಾಲೆ ಆಧುನೀಕರಣ ಕೆಲಸ ಮುಗಿಯಲಿದ್ದು, ಮುಂದಿನ 50 ವರ್ಷ ಸಮಸ್ಯೆ ಇರುವುದಿಲ್ಲ. ಜಿಲ್ಲೆಯ ಜನರು ತಾಳ್ಮೆಯಿಂದ ಸಹಕರಿಸಿ ಎಂದು ಮನವಿ ಮಾಡಿದರು.

ಶಾಸಕ ರವಿಕುಮಾರ್ ಗಣಿಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net