

ಮಂಡ್ಯ: ಬೆಂಗಳೂರಿನಲ್ಲಿ ಬೇರೆ ಜಿಲ್ಲೆ, ರಾಜ್ಯ, ದೇಶದಿಂದ ಜನರು ಬಂದು ಬದುಕು ಕಟ್ಟಿಕೊಂಡಿದ್ದಾರೆ. ಆದ್ದರಿಂದ ಕಾವೇರಿ 5ನೇ ಹಂತದ ಯೋಜನೆ ಅವರಿಗೆ ಅನುಕೂಲವಾಗಲಿದೆ. ಅಂದರೆ ನಾಡಿಗೆ ಯೋಜನೆ ಕೊಟ್ಟಂತಹ ಹೆಮ್ಮೆ ನಮ್ಮ ಸರ್ಕಾರಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಳವಳ್ಳಿ ತಾಲೂಕು ಹಲಗೂರು ಸಮೀಪದ ಟಿ.ಕೆ.ಹಳ್ಳಿಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಆಯೋಜಿಸಿದ್ದ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ
ನಾವು ಕೆಲಸ ಮಾಡುತ್ತೇವೆಯೇ ಹೊರತು ಭಾವನೆಯ ಆಧಾರದಲ್ಲಿ ರಾಜಕಾರಣ ಅಥವಾ ಚುನಾವಣೆ ಮಾಡುವುದಿಲ್ಲ. ಹಿಂದೆ ಸಿದ್ದರಾಮಯ್ಯ ಯೋಜನೆ ನೀಡಿದ್ದರು. ಈಗ ಅವರೇ ಲೋಕಾರ್ಪಣೆ ಮಾಡಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕರ ಸೇವೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಯಾವಾಗಲೂ ಒಂದೆಜ್ಜೆ ಮುಂದೆ ಇರುತ್ತಾರೆ. ಇನ್ನು ಮಂಡ್ಯ ಜಿಲ್ಲೆಯ ಮುಂದಿನ 50 ವರ್ಷಕ್ಕೆ ಅನುಕೂಲವಾಗುವಂತೆ ಎಲ್ಲ ನಾಲೆಗಳೂ ಸಂಪೂರ್ಣ ಆಧುನೀಕರಣವಾಗಬೇಕು. ನಾಲೆ ಸರಿಯಾಗಿರದ ಪರಿಣಾಮ ಶೇ.25ರಷ್ಟು ನೀರನ್ನಷ್ಟೇ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಆದ್ದರಿಂದ ನಾಲೆ ಆಧುನೀಕರಣ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ಅನುದಾನದಲ್ಲಿ 5 ಸಾವಿರ ಕೋಟಿ ರೂಗಳನ್ನು ಕೊಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಬೆಂಗಳೂರಿನ ಜನರಿಗೆ ಕುಡಿಯುವ ನೀರೊದಗಿಸುವ ಮಹತ್ವದ ಯೋಜನೆ ಕೊಟ್ಟ ತಾಲೂಕು ನಮ್ಮದು ಎನ್ನುವ ಹೆಮ್ಮೆ ಇದೆ. ಆದ್ದರಿಂದ ತಾಲೂಕಿಗೆ ಅನುಕೂಲವಾಗುವಂತೆ ಬೆಂಗಳೂರು ಜಲಮಂಡಳಿಯಿಂದ ಪ್ರತಿ ಕ್ಲಸ್ಟರ್‌ಗೆ ಮಲ್ಟಿಮಿಡಿಯಾ ಶಿಕ್ಷಣಕ್ಕೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಮಾಹಿತಿ ತೆಗೆದುಕೊಂಡಿದ್ದೇನೆ. ಇನ್ನು ತಾಲೂಕಿನಲ್ಲಿರುವ ಜಲಮಂಡಳಿಯಲ್ಲಿ ಡಿ ಗ್ರೂಪ್, ತಾಂತ್ರಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ಸಿಂಹಪಾಲು ನೀಡಬೇಕು. ಟಿ.ಕೆ.ಹಳ್ಳಿಯಲ್ಲಿ ಅಂಬೇಡ್ಕರ್ ಭವನವನ್ನು ನೂತನವಾಗಿ ನಿರ್ಮಾಣ ಮಾಡಲು ಅನುದಾನ ಕೊಡಬೇಕೆಂದು ಕೇಳಿದರು.