

ಮಂಡ್ಯ: ನಾನು ಒಬ್ಬ ಸಾಮಾನ್ಯ ರೈತನ ಮಗ. ದೇವೇಗೌಡರನ್ನ ರೈತನ ಮಗ ಎನ್ನುತ್ತಾರೆ. ಆದರೆ ಕುಮಾರಸ್ವಾಮಿ ಅವರನ್ನ ರೈತನ ಮಗ ಎನ್ನುತ್ತಾರಾ?. ದೇವೇಗೌಡರ ಮಗ ಎನ್ನುತ್ತಾರೆ. ಆದ್ದರಿಂದ ಎಚ್‌ಡಿಕೆ ಅವರಿಗೆ ಒಳ್ಳೆಯದಾಗಲಿ, ಸಂದರ್ಭ ಬಂದಾಗ ಉತ್ತರ ಕೊಡ್ತೇನೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಜಾತಿ ಇದ್ಯಾ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಕೂಡ ಭ್ರಷ್ಟಾಚಾರದಲ್ಲಿ ಜಾತಿ ಇದೇ ಎಂದು ಹೇಳಿಲ್ಲ. ಸದನದಲ್ಲಿ ಎರಡು ದಿನ ಆ ಕುರಿತು ಚರ್ಚೆಯಾಗಿದೆ. ಸದನದ ವಿಷಯವನ್ನ ಪ್ರತಿದಿನ ಹೊರಗಡೆ ಬಂದು ಮಾತನಾಡುವುದು ಸೂಕ್ತವಲ್ಲ. ಅವರು ಮಾಜಿ ಪ್ರಧಾನ ಮಗ ಎಂದು ಮಾತನಾಡುತ್ತಾರೆ. ಮಾಜಿ ಪ್ರಧಾನಿ ಮಗ, ದೇವೇಗೌಡರ ಮಗ ಎಂದು ಎಲ್ಲರಿಗೂ ಗೊತ್ತಲ್ವ. ದೇವೇಗೌಡರ ಹೆಸರನ್ನ ಏಕೆ ಕುಮಾರಸ್ವಾಮಿ ತೆಗೆದುಕೊಳ್ಳಬೇಕು?. ಮಂಡ್ಯ ಜಿಲ್ಲೆಯಲ್ಲಿ 6 ಜನರು ಗೆದ್ದಿದ್ದನ್ನ ಸಹಿಸಲು ಆಗುತ್ತಿಲ್ಲ. ಡಿ.ಕೆ.ಶಿವಕುಮಾರ್, ಚಲುವರಾಯಸ್ವಾಮಿ ಬಗ್ಗೆ ಹರಿಹಾಯ್ದರೇ ಅನುಕೂಲ ಆಗುತ್ತದೆ ಎಂದು ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.
ವರ್ಗಾವಣೆಯ ರೇಟ್ ಕಾರ್ಡ್ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ರೇಟ್ ಕಾರ್ಡ್‌ನ ತೋರಿಸಿದ್ದೀನಲ್ಲ. 2019 ರಲ್ಲಿ ಬಿಡುಗಡೆ ಆಗಿತ್ತು. ಅದೇ ರೇಟ್ ಕಾರ್ಡ್ ಅನ್ನು ಅಸೆಂಬ್ಲಿಯಲ್ಲಿ ತೋರಿಸಿದ್ದೇನೆ. ಅದರ ಬಗ್ಗೆ ಪ್ರಸ್ತಾಪ ಮಾಡುವುದು ಬೇಡಾ. ಅವರಿಗೆ ನನ್ನ ಮೇಲೆ ದ್ವೇಷವಿದ್ಯೋ?. ಪ್ರೀತಿ ಇದ್ಯೋ ಅವರಿಗೆ ಬಿಟ್ಟಿದ್ದು ಎಂದರು.