ಎಚ್‌ಡಿಕೆ ಅನುಮಾನ ಪಡದ ವ್ಯಕ್ತಿ ದೇಶದಲ್ಲಿಯೇ ಇಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

Minister Chaluvarayaswamy criticism against JDS Mandya
Published on

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅನುಮಾನ ಪಡದೇ ಇರುವಂತಹ ವ್ಯಕ್ತಿ ದೇಶದಲ್ಲಿ ಯಾರದರೂ ಇದ್ದರೆ ತಿಳಿಸಿ. ನಾವು ಒಮ್ಮೆ ನೋಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಬಗ್ಗೆ ಎಚ್‌ಡಿಕೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅವರು ಎಲ್ಲರ ಬಗ್ಗೆಯೂ ಅನುಮಾನಪಡುತ್ತಾರೆ. ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಬಗ್ಗೆಯೂ ಕಟುವಾಗಿ ಟೀಕೆ ಮಾಡಿದ್ದರು. ಆದ್ದರಿಂದ ಎಚ್‌ಡಿಕೆ ಅನುಮಾನಿಸದಿರುವ ವ್ಯಕ್ತಿಯೇ ಇಲ್ಲ. ಒಂದು ವೇಳೆ ಇದ್ದರೆ ನೋಡಿ ಆ ಮೇಲೆ ಚರ್ಚೆ ಮಾಡೋಣ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಪೆನ್‌ಡ್ರೈವ್ ಪ್ರಕರಣದ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಹೇಳಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಜೈ ಜೆಡಿಎಸ್, ಜೈ ಕುಮಾರಣ್ಣ, ಜೈ ರೇವಣ್ಣ, ಜೈ ಪ್ರಜ್ವಲ್ ಎನ್ನುತ್ತಾರೆ. ಇದನ್ನು ನೋಡಿದಾಗ ಏನನ್ನು ಹೇಳುವುದು. ಸಮಾಜ ತಲೆ ತಗ್ಗಿಸುವ ವಿಚಾರ ಇದು. ಆ ಪ್ರಕರಣ ದಿಕ್ಕು ತಪ್ಪಿಸಲು ಜೆಡಿಎಸ್ ಅವರು ಮಾತಾಡುತ್ತಾರೆ. ಕಾನೂನು ಬದ್ಧವಾಗಿ ಏನು ಆಗುತ್ತದೆ ನೋಡೋಣ. ನ್ಯಾಯಾಲಯಕ್ಕೆ ಎಲ್ಲರೂ ಸಹ ತಲೆ ಭಾಗಬೇಕಾಗುತ್ತದೆ. ನಮ್ಮ ಸರ್ಕಾರದಿಂದ ಪಕ್ಷಪಾತವಿಲ್ಲದೆ ತನಿಖೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ನ್ಯಾಯಾಲಯ ಮುಂದೆ ಎಲ್ಲವೂ ಇದೆ. ಪೆನ್‌ಡ್ರೈವ್ ಪ್ರಕರಣದ ಬಗ್ಗೆ ನಮ್ಮ ಸರ್ಕಾರ ಮಾತಾಡಬಾರದು ಎಂದು ತೀರ್ಮಾನ ಮಾಡಿದ್ದೇವೆ. ಇದು ಚರ್ಚೆ ಮಾಡುವ ವಿಚಾರವಲ್ಲ. ರಾಜಕೀಯವಾಗಿ ಬೆಳೆದುಕೊಂಡು ಬಂದಿರುವ ಕುಟುಂಬದಲ್ಲಿಯೇ ಇಂತಹ ಪರಿಸ್ಥಿತಿ ಬಂದಿದೆ. ಆದ್ದರಿಂದ ಸಾರ್ವಜನಿಕವಾಗಿ ಚರ್ಚಿಸುವ ವಿಷಯವಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಬದ್ಧವಾಗಿ ಕ್ರಮವಾಗಬೇಕು. ಇಷ್ಟೊತ್ತಿಗೆ ಎಸ್‌ಐಟಿ ಮುಂದೆ ಪ್ರಜ್ವಲ್‌ನನ್ನು ಕುಮಾರಸ್ವಾಮಿ ಕುಟುಂಬ ತಂದು ನಿಲ್ಲಿಸಬೇಕು. ಅದನ್ನು ಬಿಟ್ಟು ಮಾತಾಡುವುದಲ್ಲ ಎಂದು ತಿರುಗೇಟು ನೀಡಿದರು.
8 ತಿಂಗಳಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆಗೂ ಮುಂಚೆವರೆಗೂ ಪ್ರೋತ್ಸಾಹ ಧನ ಕೊಟ್ಟಿದ್ದೇವೆ. ಆ ಬಳಿಕ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದಾರೆ. ಮನ್ಮುಲ್ನಿಂದಲೂ ನಮಗೆ ಮಾಹಿತಿ ಕೊಟ್ಟಿಲ್ಲ. ಪ್ರೋತ್ಸಾಹಧನ ಸಂಬಂಧ ಸಿಎಂ ಜತೆ ಚರ್ಚಿಸಿ ಬಿಡುಗಡೆ ಮಾಡಿಸುತ್ತೇವೆ. ಇನ್ನು ಬಿತ್ತನೆ ಬೀಜದ ದರ ಹೆಚ್ಚಾಗಿದೆ. ಕಾರಣ ಕಳೆದ ವರ್ಷ ಮಳೆಯಾಗದ ಹಿನ್ನೆಲೆಯಲ್ಲಿ ಉತ್ಪಾದನೆಯಾಗಿಲ್ಲ. ತಮಿಳುನಾಡು, ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯಕ್ಕಿಂತಲೂ ಹೆಚ್ಚಿನ ದರ ನಿಗದಿಪಡಿಸಲಾಗಿದೆ. ಬಿತ್ತನೆ ಬೀಜವನ್ನು ರೈತರಿಂದಲೇ ಖರೀದಿ ಮಾಡಲಾಗುತ್ತದೆ. ಆದಾಗ್ಯೂ ದರ ಇಳಿಕೆ ಸಂಬಂಧ ಏನಾದರೂ ಕ್ರಮ ವಹಿಸಬಹುದೇ ಎನ್ನುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಸಭೆ ಮಾಡಿ ದರ ಇಳಿಕೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಅವರು, ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಅವ್ಯವಹಾರ ಪ್ರಕರಣ ಮಾಹಿತಿ ನನಗೆ ಇಲ್ಲ, ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಚಿವ ನಾಗೇಂದ್ರರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಬೇರೆ ಕೆಲಸ ಇಲ್ಲ. ತನಿಖೆ ನಡೆಯುತ್ತಿದೆ, ಏನಾಗಿದೆ ಎಂದು ತಿಳಿಯಬೇಕು. ತಪ್ಪಿತಸ್ಥರ ವಿರುದ್ದ ಕ್ರಮವಾಗಲಿದೆ ಎಂದು ಹೇಳಿದರು.
ಶಾಸಕ ರವಿಕುಮಾರ್ ಗಣಿಗ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಶಾಸಕ ಎಂ.ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಜನಾ ಶ್ರೀಕಾಂತ್ ಇತರರಿದ್ದರು.

ಮಾಜಿ ಸಚಿವರೇ ತನಿಖೆ ಮಾಡಲಿ
ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಳಪೆಯಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದ ಎನ್.ಚಲುವರಾಯಸ್ವಾಮಿ, ಈ ಬಗ್ಗೆ ಅನುಮಾನ ಇದ್ದರೆ ಯಾವ ಸಂಸ್ಥೆಯಿಂದ ತನಿಖೆ ಮಾಡಿಸಬೇಕೆಂದು ಪತ್ರ ಕೊಟ್ಟರೂ ಅದರಿಂದಲೇ ಮಾಡಿಸುತ್ತೇವೆ. ಇಲ್ಲದಿದ್ದರೆ ಹಿಂದೆ ಸಣ್ಣ ನೀರಾವರಿ ಸಚಿವರಾಗಿದ್ದರಿಂದ ಅನುಭವ ಇದೆ. ಆದ್ದರಿಂದ ಪುಟ್ಟರಾಜು ಅವರೇ ತನಿಖೆ ಮಾಡಿ ವರದಿ ಕೊಡಲಿ ಎಂದು ವ್ಯಂಗ್ಯವಾಡಿದರು.
ಅವರು ಎಲ್ಲ ವಿಷಯದಲ್ಲಿಯೂ ಸಮರ್ಥರು. ನಾನು ಅವರ ಬಗ್ಗೆ ಮಾತನಾಡುವಷ್ಟು ತಿಳಿದಿಲ್ಲ. ಪುಟ್ಟರಾಜು ಪಿ.ಎಚ್‌ಡಿ ಮಾಡಿದ್ದಾರೆ. ಒಂದು ವೇಳೆ ತನಿಖೆಗೆ ಒತ್ತಾಯಿಸಿ ನನಗೆ ಪತ್ರ ಬರೆಯಲು ಮುಜುಗರವಾದರೆ ಸಿಎಂ ಅಥವಾ ನೀರಾವರಿ ಸಚಿವರಿಗೆ ಬರೆಯಲಿ ಎಂದು ಕುಟುಕಿದ ಚಲುವರಾಯಸ್ವಾಮಿ, ಜೂನ್ ಅಂತ್ಯದೊಳಗೆ ಆಧುನೀಕರಣ ಕಾಮಗಾರಿ ಮುಗಿಯಬೇಕಿದೆ. ಆದರೆ ಮಳೆಯಿಂದಾಗಿ ಒಂದಷ್ಟು ದಿನ ಕೆಲಸ ಮಾಡಲಾಗಿಲ್ಲ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಪರಿಶೀಲನೆ ಮಾಡಲಾಗುವುದು ಎಂದರು.
ಇನ್ನು ಡ್ಯಾಂನಲ್ಲಿ 83 ಅಡಿ ನೀರಿನ ಸಂಗ್ರಹವಿದೆ. ಹಿಂದೆಲ್ಲ ಜೂನ್ ಎರಡನೇ ವಾರದಿಂದ ನೀರು ಹರಿಸಲಾಗುತ್ತಿತ್ತು. 90 ರಿಂದ 100 ಅಡಿ ನೀರಿನ ಸಂಗ್ರಹದ ಜತೆಗೆ ಒಳಹರಿವಿನ ಪ್ರಮಾಣ ನೋಡಿ ನಾಲೆಗೆ ನೀರು ಬಿಡಲಾಗುತ್ತಿತ್ತು. ಆದರೆ ಈ ಬಾರಿ ರೈತರಿಗೆ ನೀರಿನ ಅವಶ್ಯಕ ಎನಿಸಿದಾಗ ನೀರು ಕೊಡುವಂತೆ ಸೂಚಿಸಲಾಗಿದೆ. ಅಂತೆಯೇ ನೀರು ನಿಲ್ಲಿಸಿದಾಗ ಕಾಮಗಾರಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net