ಎಚ್‌ಡಿಕೆ ನಮ್ಮ ಬಳಿ ಕೈಕಟ್ಟಿ ನಿಂತಿದ್ದರು: ಮಾಜಿ ಸಿಎಂಗೆ ಟಾಂಗ್ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ

Minister Cheluvarayaswami
Published on

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ನಮ್ಮ ಬಳಿ ಕೈ ಕಟ್ಟಿ ನಿಂತಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಸಚಿವ ಸ್ಥಾನಕ್ಕಾಗಿ ಚಲುವರಾಯಸ್ವಾಮಿ ನನಗೆ ದುಂಬಾಲು ಬಿದ್ದಿದ್ದರು ಎಂದು ಎಚ್ಡಿಕೆ ಹೇಳಿದ್ದಾರೆ. ಆದರೆ ಅವರು ಸಿಎಂ ಆಗುವುದು ಬೇಡವೆಂದರೆ ಅವರಪ್ಪ ಮತ್ತು ಭಾವ ಹೇಳಿದ್ದರು. ಆ ಸಮಯದಲ್ಲಿ ಎಚ್‌ಡಿಕೆ ನನ್ನನ್ನೂ ಸೇರಿದಂತೆ 39 ಜನ ಶಾಸರ ಬಳಿ ಅವರು ಹೇಗೆ ನಿಂತಿದ್ದರೆಂದು ಕೇಳಿ ಎಂದು ತಿರುಗೇಟು ನೀಡಿದರು.

ಹೊಟ್ಟೆಪಾಡಿಗಾಗಿ ದೇವೇಗೌಡರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆಂದು ಹೇಳಿಲ್ಲ, ಬೇರೆ ಮಾದರಿಯಲ್ಲಿ ಹೇಳಿದ್ದೇನೆ. ದೇವೇಗೌಡರ ಈಗಿನ ಪರಿಸ್ಥಿತಿ ನೋಡಿ. ಅವರದೇ ಪಕ್ಷ ಇದ್ದರೂ ಅಳಿಯನನ್ನು ಬಿಜೆಪಿ ಪಕ್ಷದ ಚಿಹ್ನೆಯಡಿ ಚುನಾವಣಾ ಕಣಕ್ಕೆ ಇಳಿಸುತ್ತಿದ್ದಾರೆ. ಹಾಗಿದ್ದರೆ ಜೆಡಿಎಸ್ ಪಕ್ಷದ ಬಗ್ಗೆ ನಂಬಿಕೆ ಇಲ್ಲವೇ, ಅವರ ಪಕ್ಷದ ಚಿಹ್ನೆ ಬಗ್ಗೆ ವಿಶ್ವಾಸ ಇಲ್ಲವಾ ಎಂದು ಪ್ರಶ್ನಿಸಿದ ಸಚಿವ, ಜನರು ನಂಬಬೇಕು, ನಮ್ಮನ್ನು ನಂಬಿದರು. ಹಿಂದೆ ಆಡಳಿತ ಮಾಡಿದ ಅವರು ಜನರ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. 1999 ನಾನು ಗೆದ್ದಿದ್ದೆ. ಸಮರ್ಥ ಎಂಬ ಕಾರಣಕ್ಕೆ ಮಂತ್ರಿ ಸ್ಥಾನ ನೀಡಿದ್ದರು. ಈಗಲೂ ಮಂತ್ರಿಯಾಗಿದ್ದೇನೆ, ಸೋಲು ಕಂಡಿದ್ದರೆ ಮಂತ್ರಿಯಾಗುತ್ತಿದ್ದೇನಾ? ಎಂದರು.

ಬೇರೆ ಪಕ್ಷದವರು ಸೋತರೆ ನನಗೇನಾಗಬೇಕು. ನನಗೆ ನಮ್ಮ ಪಕ್ಷ ಹಾಗೂ ಜಿಲ್ಲೆಯ ಜನತೆ ಮುಖ್ಯ. ರಾಜಕೀಯವಾಗಿ ಯಾರು ಯಾರನ್ನು ತುಳಿದಿದ್ದಾರೆ, ಮುಗಿಸಿದ್ದಾರೆ ಎಂಬ ಬಗ್ಗೆ ದೊಡ್ಡ ಇತಿಹಾಸ ಇದೆ. ಹೊಟ್ಟೆ ನೋವಿಗೆ ಏನೇನು ಮಾತನಾಡಿದರೆ ಅದಕ್ಕೆ ವೈದ್ಯರು ಚಿಕಿತ್ಸೆ ನೀಡಬೇಕು. ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಾವು ಯಾವುದೇ ಲೆಕ್ಕಾಚಾರ ಹಾಕಿಲ್ಲ. ರಾಷ್ಟ್ರೀಯ ಪಕ್ಷ ಒಂದು ತಿಂಗಳ ಮೊದಲೇ ಅಭ್ಯರ್ಥಿ ಆಯ್ಕೆ ಮಾಡಿದೆ. ಅವರು ಇನ್ನು ಲೆಕ್ಕಾಚಾರದಲ್ಲಿದ್ದಾರೆ. ಯಾರೇ ಅಭ್ಯರ್ಥಿಯಾದರೂ ನಮಗೇನು, ಯಾರಾದರೂ ನಿಂತುಕೊಳ್ಳಲಿ. ಕಾಂಗ್ರೆಸ್ ಅಭ್ಯರ್ಥಿ ಈಗಾಗಲೇ ಕ್ಷೇತ್ರದ ಎಲ್ಲ ಕಡೆ ಸಂಚಾರ ಮಾಡಿದ್ದಾರೆ ಎಂದು ವಿವರಿಸಿದರು.

ಕಳೆದ ಬಾರಿ ನಾವು ಯಾರಿಗೂ ಚುನಾವಣೆ ಮಾಡಲಿಲ್ಲ. ಮನೆಯಲ್ಲಿ ಇದ್ದುಕೊಂಡು ತಟಸ್ಥವಾಗಿದ್ದೆವು. ಜಿಲ್ಲೆಯ ಜನತೆ ಸೂಕ್ತ ತೀರ್ಮಾನ ಕೈಗೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ ನೀಡಿದ್ದಾರೆ ಎಂದಿದ್ದಾರೆ. ರಾಜಕೀಯ ಪಕ್ಷಗಳ ನಡುವಿನ ಮೈತ್ರಿಯನ್ನು ಜನತೆ ಒಪ್ಪುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಒಪ್ಪಲಿಲ್ಲ. ಈಗಲೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಒಪ್ಪುತ್ತಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗ ನಾಯಕರು ಇಲ್ಲವೇ?. ಡಿಸಿಎಂ ಡಿ.ಕೆ.ಶಿವಕುಮಾರ್ ಒಕ್ಕಲಿಗರಲ್ಲವಾ, ನಾನು ಒಕ್ಕಲಿಗನಲ್ಲವಾ?. ಜಾತಿ ಎಲ್ಲ ನೋಡಿ ಆಗಿದೆ. ಮಂಡ್ಯ ಜಿಲ್ಲೆ ಮುಗಿಸಬೇಕು ಎಂದುಕೊಂಡಿದ್ದಾರಾ?. ಜೆಡಿಎಸ್ ನಾಯಕರಿಗೆ ಫ್ಯಾಕ್ಟರಿನೂ ಬೇಡ, ವಿಶ್ವವಿದ್ಯಾನಿಲಯ ಬೇಡ. ಬೇಕಾದರೆ ಮಂಡ್ಯದಲ್ಲಿರುವ ಮೆಡಿಕಲ್ ಕಾಲೇಜನ್ನು ಸ್ಥಳಾಂತರ ಮಾಡಿ ಎನ್ನುತ್ತಾರೆ. ನಾವು ಇವರನ್ನು ಕೇಳಿ ನಿರ್ಮಾಣ ತೆಗೆದುಕೊಳ್ಳಬೇಕಾ?. ನಮಗೆ ಜಿಲ್ಲೆಯ ಜನರೇ ಮುಖ್ಯ, ಅವರ ಅಭಿಪ್ರಾಯದಂತೆ ಮುನ್ನಡೆಯುತ್ತೇವೆ ಎಂದರು.

ಶಾಸಕ ರವಿಕುಮಾರ್ ಗಣಿಗ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net