

ಮಂಡ್ಯ: ಕನ್ನಡದ ಐಕ್ಯತೆಯ ಧ್ಯೋತಕವಾಗಿ ನಮ್ಮ ಸಾಹಿತ್ಯ-ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುತ್ತಾ ಬರಲಾಗಿದೆ. ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಜನಮನದಲ್ಲಿ ಸದಾ ಕಾಲ ಚೈತನ್ಯಶೀಲವಾಗಿಡಲು ಕನ್ನಡ ಸಾಹಿತ್ಯ ಸಮ್ಮೇಳನ ಸಹಕರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಖ್ಯಾತಿ ಇರುವ ನಮ್ಮ ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.20, 21 ಮತ್ತು 22ರಂದು ಆಚರಿಸುವ ಅವಕಾಶ ಲಭಿಸಿರುವುದು ನಾವೆಲ್ಲರೂ ಸಂಭ್ರಮಿಸಬೇಕಾದ ವಿಷಯ. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕಾರ್ಯಚಟುವಟಿಕೆ ಪ್ರಾರಂಭವಾಗಿವೆ. ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸುವ ದೃಷ್ಟಿಯಲ್ಲಿ 28 ಸಮಿತಿಗಳನ್ನು ರಚಿಸಿದ್ದು, ಎಲ್ಲ ಸಮಿತಿಗಳ ಅಧ್ಯಕ್ಷತೆಯನ್ನು ಜಿಲ್ಲೆಯ ಶಾಸಕರು ವಹಿಸಿಕೊಂಡು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವುದು ಮತ್ತಷ್ಟು ಮೆರಗು ತಂದಿದೆ. ಸಮ್ಮೇಳನಕ್ಕೆ ಸ್ಥಳ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸೂಕ್ತವಾದ ಜಾಗವನ್ನು ಆಯ್ಕೆ ಮಾಡುವ ಸಂಬಂಧ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಸಮ್ಮೇಳನಕ್ಕೆ ಸೂಕ್ತ, ವಿಶಾಲವಾದ ಹಾಗೂ ಸುರಕ್ಷಿತವಾದ ಸ್ಥಳದ ಅಗತ್ಯವಿದ್ದ ಕಾರಣ ನಗರದ ಹೊರವಲಯದ ಖಾಸಗಿ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದ ಜಾಗವನ್ನು ತಾಂತ್ರಿಕ ವರದಿಯನ್ವಯ ಅಂತಿಮಗೊಳಿಸಲಾಗಿದೆ. ನುಡಿಜಾತ್ರೆಯು ಬರೀ ನಾಡಿನ ಹಬ್ಬವಲ್ಲ, ನಮ್ಮ ಮನೆ ಮನೆಯ ಹಬ್ಬವಾಗಬೇಕು. ಎಲ್ಲರೂ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮ್ಮೇಳನಕ್ಕೆ ಮತ್ತಷ್ಟು ಮೆರುಗನ್ನು ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.