ನೂತನ ಪ್ರವಾಸೋದ್ಯಮ ನೀತಿ ಶೀಘ್ರ ಜಾರಿ : ಸಚಿವ ಸಿ.ಟಿ.ರವಿ

31TMK_CT_Ravi_Meeting 1
Published on

ತುಮಕೂರು: ರಾಜ್ಯದಲ್ಲಿ ‘ನೂತನ ಪ್ರವಾಸೋದ್ಯಮ ನೀತಿ’ ಶೀಘ್ರದಲ್ಲಿ ಜಾರಿಯಾಗಲಿದ್ದು, ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ

ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಯ್ಸಳರ ಕಾಲದ ಸ್ಮಾರಕಗಳು, ಜೈನರು, ರಾಮಾಯಣ ಹಾಗೂ ವಿಜಯನಗರ ಕಾಲದ ಐತಿಹ್ಯ ತಿಳಿಸುವ ಸ್ಥಳಗಳ ತುರ್ತು ರಕ್ಷಣೆ ದೃಷ್ಟಿಯಿಂದ ಯಾದಿ ತರಿಸಿಕೊಳ್ಳಲಾಗಿದೆ ಎಂದರು.

ತುಮಕೂರು ಜಿಲ್ಲೆಯ ವಿವಿಧ 85 ಸ್ಥಳಗಳ ರಕ್ಷಣೆಗೆ 39.40 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು 42 ಕಾಮಗಾರಿ ಪ್ರಗತಿಯಲ್ಲಿದ್ದು, 9 ಪೂರ್ಣಗೊಂಡಿವೆ, ಇನ್ನುಳಿದ 34 ಕಾಮಗಾರಿ ಆರಂಭವಾಗಿಲ್ಲದಿರುವ ಬಗ್ಗೆ ಗಂಭೀರ ಎಚ್ಚರಿಕೆ

ನೀಡಲಾಗಿದೆ ಎಂದರು.

ನಾನು ನಿರ್ವಹಿಸುವ ಕನ್ನಡ ಮತ್ತು ಸಂಸ್ಕೃತಿ, ಯುವಜನ ಮತ್ತು ಕ್ರೀಡೆ ಹಾಗೂ ಪ್ರವಾಸೋದ್ಯಮ ಇಲಾಖೆಗಳಿಗೆ ಈಗ ಸಂಭ್ರಮದ ಕಾಲವಿಲ್ಲ, ಕಳೆದ ಆರು ತಿಂಗಳಿನಿಂದ ಕರೊನಾ ನಮ್ಮ ಸಂಭ್ರಮ ಕಸಿದಿದೆ, ಸಾರ್ವಜನಿಕವಾಗಿ ಹೆಚ್ಚು ಚಟುವಟಿಕೆ ನಡೆಸಲು ಅವಕಾಶ ಸಿಕ್ಕಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದಲ್ಲಿ 17 ಸಾವಿರ ಕಲಾವಿದರಿಗೆ ತಲಾ 2 ಸಾವಿರ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ, ನಿವೃತ್ತ ಕಲಾವಿದರ ಮಾಸಾಶನವನ್ನು 1500ರೂ. ನಿಂದ 2 ಸಾವಿರಕ್ಕೆ ಹೆಚ್ಚಿಸಲಾಗಿದ್ದು ಮಾಸಾಶನ ಅರ್ಜಿಗಳ ವಿಲೇವಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು. ನನ್ನ ಮೂರು ಇಲಾಖೆಗಳಲ್ಲಿ ಶೇ.60 ಹುದ್ದೆ ಖಾಲಿಯಾಗಿವೆ, ಮೂಗಿಗಿಂತ ಮೂಗುತಿ ಭಾರ ಎಂಬಂತೆ ಶೇ.90 ಹಣ ವೇತನಕ್ಕೆ ಖರ್ಚಾಗುತ್ತಿದೆ. ಹಿಂದೆ ಕೆಲವರಿಗೆ ಬಡ್ತಿ ನೀಡುವ ಸಲುವಾಗಿಯೇ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಇದಕ್ಕೆಲ್ಲ್ಲ ಕಡಿವಾಣ ಹಾಕುವ ಅವಶ್ಯಕತೆಯಿದೆ ಎಂದರು.

ಇಲಾಖೆಗಳ ವಿಲೀನದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ. ಸಚಿವ ಸಂಪುಟ ಒಪ್ಪಿಗೆ ನೀಡಿದರೆ ಸಾರ್ವಜನಿಕರಿಗೆ ತುರ್ತಾಗಿ ಗುಣಮಟ್ಟದ ಕೆಲಸವಾಗಲು ಇಲಾಖೆ ಪುನರಚನೆಯಾಗಲಿದೆ ಎಂದರು. ಬೆಂಗಳೂರಿಗೆ ಸಮೀಪವಿರುವ ತುಮಕೂರು ನಗರದಲ್ಲಿ ಕ್ರೀಡಾಗ್ರಾಮ ನಿರ್ಮಿಸುವ ಚಿಂತನೆ ಸರ್ಕಾರದ ಮುಂದಿದ್ದು ಜಿಲ್ಲಾಡಳಿತ ಅಗತ್ಯ ಜಮೀನು ನೀಡಿದರೆ ಇದು ಸಾಕಾರವಾಗಲಿದೆ. ಜಯಂತಿಗಳು ಜಾತಿ, ರಾಜಕೀಯ ಪಕ್ಷಗಳಿಗೆ ಸೀಮಿತವಾಗಿದ್ದು ಇದರ ಸ್ವರೂಪ ಬದಲಾಯಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ವಿವರಿಸಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಶಿಕ್ಷಣ ನೀತಿ ವಿರೋಧಿಸುವುದು ತಪ್ಪು. ದೇಶದ 22 ಅಧಿಕೃತ ಭಾಷೆಗಳನ್ನು ಕಲಿಯಲು ಅವಕಾಶ ನೀಡಲಾಗಿದೆ, ಹಿಂದಿ ಭಾಷೆಯ ಕಾರಣಕ್ಕೆ ಸರ್ಕಾರಿ ಶಾಲೆಗಳು ಮುಚ್ಚುತ್ತಿಲ್ಲ, ಕಾನ್ವೆಂಟ್ ಕಾರಣಕ್ಕೆ ಮುಚ್ಚುತ್ತಿವೆ. ಇದನ್ನು

ಸರಿಪಡಿಸಬೇಕು ಎಂದರು. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಸಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶವಿದ್ದು ಈ ನಿಯಮವನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಂ.ವಿ.ವೀರಭದ್ರಯ್ಯ, ತಿಪ್ಪೇಸ್ವಾಮಿ, ಜಿಪಂ ಉಪಾಧ್ಯಕ್ಷೆ ಶಾರದಾ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net