

ವಿಜಯವಾಣಿ ಸುದ್ದಿಜಾಲ ನರಗುಂದ
ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ವಿುಕರು ಉದ್ಯೋಗ ಕೇಳಿಕೊಂಡು ಬಂದರೆ ಅಂತವರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಎನ್ಆರ್ಇಜಿ ಕಾಮಗಾರಿ ಇಂಜಿನಿಯರ್ ಐ.ಎಸ್. ಶಹಾಪೂರ ಅವರಿಗೆ ಗಣಿ, ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ ಸೂಚಿಸಿದರು.
ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಸಂಕದಾಳ ಗ್ರಾಮದ ಬೃಹತ್ ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭಾನುವಾರ ಅನಿರೀಕ್ಷಿತ ಭೇಟಿ ನೀಡಿದ ಅವರು, ಕಾಮಗಾರಿ ಪರಿಶೀಲನೆ ನಡೆಸಿದರು.
ವಲಸೆ ಬಂದಿರುವ ಹಾಗೂ ಉದ್ಯೋಗ ಖಾತ್ರಿ ಚೀಟಿಗಳನ್ನು ಹೊಂದಿರುವ ಎಲ್ಲ ಕಾರ್ವಿುಕರಿಗೂ ಸ್ಥಳೀಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಿದೆ. ಪ್ರತಿಯೊಬ್ಬ ಪುರುಷ ಮತ್ತು ಮಹಿಳಾ ಕಾರ್ವಿುಕರಿಗೆ ದಿನವೊಂದಕ್ಕೆ 275 ರೂ. ಸರಿಸಮಾನ ಕೂಲಿ ಹಾಗೂ 10 ರೂ. ಸಲಕರಣೆ ಬಾಬ್ತು ನೀಡಲಾಗುವುದು. ತಾಲೂಕಿನಲ್ಲಿರುವ ಒಟ್ಟು 13 ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರತಿದಿನ 2,500 ಜನ ಕೂಲಿ ಕಾರ್ವಿುಕರು ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಂತೆ ಸಂಕದಾಳ ಗ್ರಾಮದಲ್ಲಿರುವ 36 ಎಕರೆ ವಿಸ್ತೀರ್ಣದ ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಾರ್ವಿುಕರಿಗೆ ಯಾವುದೇ ಅನ್ಯಾಯವಾಗದಂತೆ ಸಂಬಳ ಪಾವತಿಸಬೇಕು. ಕೆರೆ ಮಧ್ಯ ಭಾಗದಲ್ಲಿ ನಿರ್ವಿುಸಿರುವ ನಡುಗಡ್ಡೆಗೆ ಪರಸಿ ಕಲ್ಲುಗಳನ್ನು ಜೋಡಿಸಬೇಕು. ಕೆರೆ ಸುತ್ತಲೂ ಬೆಳೆದಿರುವ ಮುಳ್ಳಿನ ಕಂಟಿಗಳನ್ನು ತೆರವುಗೊಳಿಸಬೇಕು. ಈ ಹಿಂದೆ ನೆಟ್ಟಿರುವ ಎಲ್ಲ ಸಸಿಗಳಿಗೂ ಹನಿ ನೀರಾವರಿ ಅಳವಡಿಸಿಕೊಳ್ಳುವ ಮೂಲಕ ಸಸಿಗಳನ್ನು ಸಂರಕ್ಷಿಸಬೇಕು ಎಂದು ಸೂಚಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಂ. ಹುಡೇದ, ಸಿದ್ದಪ್ಪ ಭೂಮಣ್ಣವರ, ಚನ್ನಪ್ಪ ಚಿನ್ನಪ್ಪಗೌಡ್ರ, ನಾಗಪ್ಪ ನಾಯ್ಕರ, ಸಿದ್ದಪ್ಪ ಹನಸಿ, ಚನ್ನಪ್ಪ ಸಾತನ್ನವರ, ಸೋಮನಗೌಡ ಪೊಲೀಸ್ ಪಾಟೀಲ, ಇತರರು ಉಪಸ್ಥಿತರಿದ್ದರು.