

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಹಗರಣದ ಕುರಿತು ನ್ಯಾಯಾಂಗ ಅಥವಾ ವಿಶೇಷ ತನಿಖಾ ತಂಡ(ಎಸ್‌ಐಟಿ)ದಿಂದ ತನಿಖೆ ನಡೆಸಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದ್ದಾರೆ.
‘ನಾನು ಮೈಸೂರಿಗೆ ಬಂದು ಹಣ ಮಾಡಬೇಕಾ?’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪ್ರಶ್ನಿಸಿದ್ದಾರೆ. ‘ನೀವು ಹಣ ಮಾಡುತ್ತಿದ್ದೀರ ಎಂದು ನಾವು ಆರೋಪ ಮಾಡುತ್ತಿಲ್ಲ. ಆದರೆ, ಅಧಿಕಾರಿಗಳನ್ನು ಏತಕ್ಕೆ ರಕ್ಷಣೆ ಮಾಡುತ್ತಿದ್ದೀರ ಎಂಬುದು ನಮ್ಮ ಪ್ರಶ್ನೆಯಾಗಿದೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಡಾದಲ್ಲಿ ನಡೆದ ಅಕ್ರಮದ ಕುರಿತು ನಾನು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದೆ. ಈ ಬಗ್ಗೆ ಪರಿಶೀಲಿಸಿ ಅಕ್ರಮ ತಡೆಯಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೆ. ಹಗರಣದ ಕುರಿತು ವರದಿ ಪಡೆಯಲು ಸೋಮವಾರ ಸಚಿವ ಭೈರತಿ ಸುರೇಶ್ ನಗರಕ್ಕೆ ಆಗಮಿಸಿ ಮುಡಾ ದಲ್ಲಿ ಸಭೆ ನಡೆಸಿದರು. ನಾನು ಮುಡಾ ಸದಸ್ಯ ಹಾಗೂ ದೂರುದಾರನಾಗಿದ್ದರೂ ಸಭೆಗೆ ನನಗೆ ಆಹ್ವಾನ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಭೈರತಿ ಸುರೇಶ್ ಕಣ್ಣೊರೆಸುವ ತಂತ್ರದ ರೀತಿಯಲ್ಲಿ ಸಭೆ ನಡೆಸಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೋಗಿದ್ದಾರೆ. ನನ್ನನ್ನು ಸಭೆಗೆ ಆಹ್ವಾನಿಸಿದ್ದರೆ ಅಧಿಕಾರಿಗಳು ಅಮಾನತಿನ ಶಿಕ್ಷೆಗೆ ಗುರಿಯಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ನನ್ನನ್ನು ಸಭೆಗೆ ಅಹ್ವಾನಿಸಿಲ್ಲ. ಹಗರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಈ ವಿಚಾರ ಗೊತ್ತಿರುವ ಕಾರಣಕ್ಕೆ ಸಚಿವ ಭೈರತಿ ಸುರೇಶ್ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಿರುದ್ಧ ಮಾತ್ರ ಟೀಕೆ ಮಾಡಿದರೆ ಹೋರತು ನನ್ನ ವಿರುದ್ಧ ಟೀಕೆ ಮಾಡುವ ಸಾಹಸ ಮಾಡಿಲ್ಲ. ಈ ಹಗರದ ಕುರಿತು ಸದನದ ಹೊರಗೆ ಹಾಗೂ ಒಳಗೆ ಹೋರಾಟ ನಡೆಸಲಾಗುವುದು ಎಚ್ಚರಿಸಿದರು.