

ಕೋಲಾರ : ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯವಾಕ್ಯವನ್ನು ಗಮನದಲ್ಲಿಟ್ಟುಕೊಂಡು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಉತ್ತಮ ಬಜೆಟ್ ಮಂಡಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಜನಪರ ಬಜೆಟ್ ಮಂಡನೆಯಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಆಶಾಭಾವನೆ ವ್ಯಕ್ತಪಡಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರೊನಾದಿಂದ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದರೂ ಮೂಲಸೌಕರ್ಯ ಒದಗಿಸಲು ಹೆಚ್ಚು ಆದ್ಯತೆ ನೀಡಿದ್ದಾರೆ. ಪ್ರತಿಪಕ್ಷಗಳಿಗೆ ಬೇರೆ ಕೆಲಸ ಇಲ್ಲವಾದ್ದರಿಂದ ಎಲ್ಲದಕ್ಕೂ ಟೀಕಿಸುತ್ತಿದ್ದಾರೆ ಎಂದು ಹೇಳಿದರು.
ವಾಸ್ತವವಾಗಿ ಇದೊಂದು ಐತಿಹಾಸಿಕ ಬಜೆಟ್, ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದ ವೃದ್ಧಿಗೆ ಪೂರಕವೆನಿಸಲಿದೆ. ಅಭಿವೃದ್ಧಿಗೆ ಹಣದ ಅವಶ್ಯಕತೆ ಇರುವುದರಿಂದ ಇಂಧನ ಬೆಲೆ ಹೆಚ್ಚಿಸುವುದು ಅನಿವಾರ್ಯ. ತೆರಿಗೆ ಕೊಂಚ ಹೊರೆಯಾದರೂ ಮುಂದೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ವರದಾನವಾಗಲಿದೆ ಎಂದರು. ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಹಣ ಒದಗಿಸಲಾಗುತ್ತಿದೆ ಎಂದು ಅಂಕಿ-ಅಂಶ ಸಹಿತ ಮಾಹಿತಿ ನೀಡಿದ ಅವರು ಪ್ರತಿಪಕ್ಷಗಳು ಹೊರತುಪಡಿಸಿ ದೇಶದ ಎಲ್ಲ ವರ್ಗದ ಜನತೆ ಬಜೆಟ್ ಸ್ವಾಗತಿಸಿದ್ದಾರೆ ಎಂದರು.
ರಿಂಗ್ ರೋಡ್ ಅಗತ್ಯ: ಕೋಲಾರ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದರಿಂದ ರಿಂಗ್ ರೋಡ್ ಅಗತ್ಯ. ಈ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವೆ ಎಂದರು. ರಾಜ್ಯಾದ್ಯಂತ ಅಕ್ರಮ-ಸಕ್ರಮ ಸಂಬಂಧ ಉನ್ನತಮಟ್ಟದಲ್ಲಿ ಸಭೆ ನಡೆದು ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ದಾವಣಗೆರೆಯೊಂದರಲ್ಲೇ 65 ಸಾವಿರ ಅಕ್ರಮ ಮನೆಗಳನ್ನು ಗುರುತಿಸಲಾಗಿದೆ. ರಾಜ್ಯದ ಎಲ್ಲ ಕಡೆ ಉಪ ಸಮಿತಿ ಇನ್ನಷ್ಟು ಮಾಹಿತಿ ಕಲೆ ಹಾಕಲು ನಿರ್ಧರಿಸಿದ್ದು, ಸುಪ್ರೀಂಕೋರ್ಟ್ ಆದೇಶ ಪರಿಗಣಿಸಿ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಜಿಲ್ಲಾ ಮಾಧ್ಯಮ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಸಂಘಟನಾ ಉಸ್ತುವಾರಿ ಜಯಚಂದ್ರರೆಡ್ಡಿ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಮಮತಮ್ಮ, ಸತ್ಯನಾರಾಯಣರಾವ್ ಇತರರು ಉಪಸ್ಥಿತರಿದ್ದರು.
ಕೈನಲ್ಲಿ ಗೊಂದಲ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಕುರ್ಚಿಗೆ ಪೈಪೋಟಿ ನಡೆದಿದೆ. ಡಾ.ಜಿ.ಪರಮೇಶ್ವರ್ ದಲಿತ ಸಿಎಂ ವಿಚಾರದಡಿ ಅವಕಾಶಕ್ಕೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ. ಆ ಪಕ್ಷದ ಮುಖಂಡರು ತಮ್ಮಲ್ಲಿನ ಗೊಂದಲ ಮರೆಮಾಚಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಆರೆಸ್ಸೆಸ್ ಮೇಲೆ ಆರೋಪ ಸಲ್ಲದು: ಕುರುಬರಿಗೆ ಎಸ್ಟಿ ಮೀಸಲಾತಿಗಾಗಿ ನಡೆದಿರುವ ಹೋರಾಟದ ಹಿಂದೆ ಆರೆಸ್ಸೆಸ್ ಪಾತ್ರವಿಲ್ಲ. ಹೋರಾಟಕ್ಕೆ ಹಣ ನೀಡಿದೆ ಎಂಬುದು ಸುಳ್ಳು, ಪ್ರತಿಯೊಂದು ಸಮುದಾಯಗಳು ಹಕ್ಕುಗಳಿಗಾಗಿ ಹೋರಾಡುವುದು ಸಹಜ. ಕುರುಬರು ಮೀಸಲಾತಿಗೆ ಹಕ್ಕು ಮಂಡಿಸಿದ್ದಾರೆ. ಸಮಾಜಕ್ಕೆ ಸೇರಿದ ಸಚಿವರು ಧ್ವನಿಗೂಡಿಸಿದರೆ ತಪ್ಪೇನು ಎಂದು ಪ್ರಶ್ನಿಸಿದರು. ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿರುವೆ, ಸಚಿವ ಸ್ಥಾನ ಸಿಕ್ಕಿದೆ, ಮುಂದೆಯೂ ಬಿಜೆಪಿಯಲ್ಲೇ ಉಳಿಯುವೆ, ಸಿದ್ದರಾಮಯ್ಯ ಸಮಾವೇಶ ನಡೆಸಿದಲ್ಲಿ ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧವಾಗಿ ಭಾಗವಹಿಸಲಾರೆ ಎಂದು ಸ್ಪಷ್ಟಪಡಿಸಿದರು.