ಕನ್ನಡ ಚಲನಚಿತ್ರಕ್ಕೆ ಸಬ್ಸಿಡಿ ಮೊತ್ತ ಹೆಚ್ಚಳ ಬಗ್ಗೆ ಪರಿಶೀಲನೆ: ಸಚಿವ ಭೋಸರಾಜು ಭರವಸೆ

3 Dwd 1 (N.S.Bosaraju)
Published on

ಬೆಂಗಳೂರು:ಕನ್ನಡ ಚಲನಚಿತ್ರಕ್ಕೆ ನೀಡಲಾಗುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸುವ ಕುರಿತು ಪುನರ್​ ಪರಿಶೀಲಿಸಲಾಗುವುದು ಎಂದು ಸಚಿವ ಭೋಸರಾಜು ವಿಧಾನಪರಿಷತ್ತಿಗೆ ಭರವಸೆ ನೀಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಉಮಾಶ್ರೀ ಕೇಳಿದ್ದ ಪ್ರಶ್ನೆಗೆ ಸಿಎಂ ಪರವಾಗಿ ಉತ್ತರಿಸಿದ ಸಚಿವರು, ಸಬ್ಸಿಡಿ ಹೆಚ್ಚಳದ ಕುರಿತು ಸಿಎಂ ಗಮನಕ್ಕೆ ತರುತ್ತೇನೆ. ಹಿಂದಿನ ಸರ್ಕಾರ ಆಯ್ಕೆ ಸಮಿತಿ ಮಾಡದ ಕಾರಣ 2019-20ರಿಂದ 2023-24ರವರೆಗೆ ಚಲನಚಿತ್ರಗಳಿಗೆ ಸಹಾಯಧನ ನೀಡುವ ಪ್ರಕ್ರಿಯೆ ನಡೆದಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಆಯ್ಕೆ ಸಲಹಾ ಸಮಿತಿಯನ್ನು ರಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2019ರಿಂದ 2023ವರೆಗೆ ಆಯ್ಕೆಯಾದ 100 ಚನಲಚಿತ್ರಗಳಿಗೆ ಸಹಾಯಧನ ವಿತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.2023 ಮತ್ತು 2024ನೇ ಸಾಲಿನ ಆಯ್ಕೆ ಸಲಹಾ ಸಮಿತಿ ರಚಿಸಿ ಸಹಾಯಧನಕ್ಕೆ ಅರ್ಜಿ ಆಹ್ವಾನಿಸುವುದು ಬಾಕಿ ಇದೆ ಎಂದು ಸಚಿವರು ಹೇಳಿದರು.

ಇದಾದ ಬಳಿಕ ಉಮಾಶ್ರೀ ಮಾತನಾಡಿ, 2005ರಲ್ಲಿ ಸಿನಿಮಾಗಳಿಗೆ ನೀಡಲಾಗುವುದು ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲಾಗಿತ್ತು. 20 ವರ್ಷವಾದರೂ ಹೆಚ್ಚಿಸಿಲ್ಲ. ಹಾಗಾಗಿ, ಸಬ್ಸಿಡಿ ಮೊತ್ತ ಹೆಚ್ಚಿಸುವ ಮೂಲಕ ಕಲಾವಿದರ ನೆರವಿಗೆ ಬರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net