

ತಿಪಟೂರು: ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ವಿಕಾಸ್ ಯಾತ್ರಾ ಬೈಕ್ ರ‌್ಯಾಲಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಿದರು.
ಅಲ್ಲದೆ ಇತ್ತೀಚೆಗೆ ಹತ್ಯೆಯಾದ ಕನ್ಹಯ್ಯ ಲಾಲ್ ಮತ್ತು ಉಮೇಶ್‌ಗೆ ಶ್ರದ್ಧಾಂಜಲಿ ಸಲ್ಲಿಸಿ, ಶ್ರೀ ಸತ್ಯ ಗಣಪತಿ ಕಲ್ಯಾಣ ಮಂಟಪದಲ್ಲಿ ಯುವ ಮೋರ್ಚಾ ಕಾರ‌್ಯಕಾರಿಣಿ ಸಭೆ ನಡೆಸಿದರು.
ಈ ಹಿಂದೆ ಹೊಟ್ಟೆಪಾಡಿಗಾಗಿ ಭಾರತಕ್ಕೆ ಬಂದವರು ಇಲ್ಲಿನ ಜನರ ದೌರ್ಬಲ್ಯ ಅರಿತು, ಅದರ ದುರ್ಬಳಕೆ ಮಾಡಿಕೊಂಡು ಈ ದೇಶವನ್ನು ಆಳಿದ್ದಲ್ಲದೆ, ನೂರಾರು ವರ್ಷ ಲೂಟಿ ಮಾಡಿ, ನಮ್ಮ ಧರ್ಮ, ಪೂಜಾ ವಿಧಾನಗಳಲ್ಲಿ ಪರಿವರ್ತನೆ ಮಾಡಿದರು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಭಾರತದ ಮೂಲ ಸಂಸ್ಕೃತಿ ಹಾಳು ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ, ಕೆಲವರನ್ನು ಕೈಗೊಂಬೆ ಮಾಡಿಕೊಂಡು, ಜನರಲ್ಲಿ ದೇಶದ ವಿರುದ್ಧ ಮಾನಸಿಕತೆಯ ಪರಿವರ್ತನೆ ಮಾಡಿ, ರಾಷ್ಟ್ರಿಯ ವಿಚಾರಗಳ ಭಾವನೆಗಳನ್ನು ಹಾಳುಮಾಡಿ, ವ್ಯವಸ್ಥಿತವಾಗಿ ಈ ದೇಶದ ಸಂಸ್ಕೃತಿಯನ್ನು ಹಾಳುಮಾಡಿದರು. ಕಡೆಗೆ ಗಳಿಸಿದ್ದು ಸ್ವಾಭಿಮಾನದ ಸ್ವಾತಂತ್ರ್ಯವೇ ಆದರೂ ಬ್ರಿಟಿಷರು ಹಾಕಿಕೊಟ್ಟ ವ್ಯವಸ್ಥೆಯೇ ಜಾರಿಯಲ್ಲಿತ್ತು. ಇದರ ಪರಿವರ್ತನೆಗೆ ಮೊಟ್ಟ ಮೊದಲು ಮುಂದಾದವರು ಅಲ್ಪ ಬಹುಮತದ ಸರ್ಕಾರದ ಮಾಜಿ ಪ್ರಧಾನಿ ಅಟಲ್‌ಜೀ. ಆ ನಂತರ ಅದನ್ನು ಮುಂದುವರಿಸಿದವರು ಅಪರೂಪಕ್ಕೆ ಈ ದೇಶಕ್ಕೆ ದೊರೆತಿರುವ ಪ್ರಧಾನಿ ಮೋದಿ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಳ್ಳೇಕಟ್ಟೆ ಸುರೇಶ್, ನಗರಾಧ್ಯಕ್ಷ ಗುಲಾಬಿ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್, ಗಂಗರಾಜು, ಶಂಕರಪ್ಪ, ಗಂಗಾಧರ್, ನಗರಸಭೆ ಅಧ್ಯಕ್ಷ ಪಿ.ಜೆ. ರಾಮ ಮೋಹನ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಶಿಕಿರಣ್, ಸದಸ್ಯರಾದ ಸಂಧ್ಯಾ ಕಿರಣ್,ಪದ್ಮಾ ತಿಮ್ಮೇಗೌಡ, ಮುಂತಾದವರು ಇದ್ದರು.
ಬ್ರಿಟಿಷರಿಗೆ ಮುಂಚೆಯೇ ಗೊತ್ತಿತ್ತು..: ಮುರಳಿ ಮನೋಹರ ಜೋಷಿ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಈ ದೇಶದ ಮಕ್ಕಳು ಇಲ್ಲಿನ ಸಂಸ್ಕೃತಿ, ರಾಷ್ಟ್ರೀಯ ಭಾವನೆ, ಸ್ವಾಭಿಮಾನ, ದೇಶ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು, ಮಣಿದವರ ಇತಿಹಾಸದ ಬಗ್ಗೆ ತಿಳಿಯಬೇಕೆನ್ನುವ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ ಪಠ್ಯಕ್ರಮದಲ್ಲಿ ಪರಿಷ್ಕರಣೆ ಆಗಬೇಕು ಎಂದಿದ್ದರು. ಅಲ್ಲಿವರೆಗೂ ಟಿಪ್ಪು ದ ಗ್ರೇಟ್, ಔರಂಗಜೇಬ್ ದ ಗ್ರೇಟ್ ಎಂದು ಬಿಂಬಿಸುವ ಜತೆಗೆ 2010ರಲ್ಲಿ ಮುದ್ರಣವಾದ ಇತಿಹಾಸದ ಪಠ್ಯದಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಟಿಪ್ಪು ಎಂದು ಬರೆಸಲಾಗಿತ್ತು. ಟಿಪ್ಪು ಬದುಕಿದ್ದ ಕಾಲ ಮತ್ತು ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾಲದ ನಡುವಿನ ಅವಧಿಯ ವ್ಯತ್ಯಾಸವನ್ನೇ ಅರಿಯದೆ ಅವರಿಗೆ ತೋಚಿದಂತೆ ಮುದ್ರಿಸಲಾಗಿತ್ತು. ಮುಂದೆ ಈ ದೇಶದಲ್ಲಿ ಈ ರೀತಿ ಆಗುತ್ತದೆ ಎಂಬ ಪರಿಕಲ್ಪನೆ ಬ್ರಿಟಿಷರಿಗೆ ಮುಂಚೆಯೇ ಗೊತ್ತಿತ್ತು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಹೆಲ್ಮೆಟ್ ಧರಿಸದ ಶಿಕ್ಷಣ ಸಚಿವ: ಸರ್ಕಾರದ ಭಾಗವಾಗಿರುವ ಶಿಕ್ಷಣ ಸಚಿವರು ತಾವೂ ಸೇರಿ ಹೆಲ್ಮೆಟ್ ಧರಿಸದ ನೂರಾರು ಕಾರ್ಯಕರ್ತರ ಬೈಕ್ ರ‌್ಯಾಲಿಯ ಮುಂಚೂಣಿಯಲ್ಲಿದ್ದು, ಸಾರ್ವಜನಿಕ ಚರ್ಚೆಗೆ ಗ್ರಾಸವಾಯಿತು. ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಪೊಲೀಸರು ಜಾಣ ಮೌನ ವಹಿಸಿದ್ದರು.
ದಿಟ್ಟ, ಸ್ಪಷ್ಟ, ಪ್ರಧಾನಿ ಮೋದಿ ಇಲ್ಲಿವರೆಗೂ 156 ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಎಲ್ಲಿಯೂ ಅವರ ಹೆಸರಿಲ್ಲ. ಇಂದು ಮೋದಿ ಇಡೀ ವಿಶ್ವ ನಂಬುವಂತಹ ವ್ಯಕ್ತಿಯಾಗಿ ಬೆಳೆಯುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ಮತ್ತೊಮ್ಮೆ ಭಾರತ ವಿಶ್ವ ಗುರು ಆಗುವುದರಲ್ಲಿ ಸಂದೇಹವಿಲ್ಲ. ಜನತೆ ಕೂಡಾ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಬಯಸುತ್ತಿದ್ದಾರೆ.
- ಬಿ.ಸಿ.ನಾಗೇಶ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ