ಬ್ಲಾಕ್ ಲಿಸ್ಟ್​ಗೆ ಸೇರಿಸಬೇಕಾದೀತು ಹುಷಾರ್ ; ಎಲ್ ಅಂಡ್ ಟಿ ಕಂಪನಿಗೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಎಚ್ಚರಿಕೆ

empress (2)
Published on

ತುಮಕೂರು : ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್​ಸಿಟಿ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವಿಳಂಬ ಮಾಡದೆ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಮಹಾತ್ಮ ಗಾಂಧಿ ಕ್ರೀಡಾಂಗಣ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಎಂಪ್ರೆಸ್ ಸರ್ಕಾರಿ ಕಾಲೇಜು ಸೇರಿ ಗ್ರಂಥಾಲಯ ಕಾಮಗಾರಿಗಳ ವೀಕ್ಷಣೆ ಮಾಡಿ ಮಾತನಾಡಿದ ಅವರು, ಸಾಕಷ್ಟು ವಿಳಂಬವಾಗಿದ್ದು ಕಾಮಗಾರಿ ಗುಣಮಟ್ಟ ಕಾಯ್ದುಕೊಂಡು ಕೂಡಲೇ ಪೂರ್ಣಗೊಳಿಸಬೇಕು ಎಂದರು.

ಬಹುತೇಕ ಸ್ಮಾರ್ಟ್​ಸಿಟಿ ಅಭಿವೃದ್ಧಿ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪುತ್ತಿವೆ. ಅವಶ್ಯವಿದ್ದಲ್ಲಿ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತುಮಕೂರು ಸ್ಮಾರ್ಟ್​ಸಿಟಿ ಅಭಿವೃದ್ಧಿ ಕಾಮಗಾರಿಗಳಲ್ಲಿ ದೇಶದಲ್ಲಿ 9ನೇ ಮತ್ತು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, 2023ರೊಳಗೆ ಕಾಮಗಾರಿ ಮುಗಿಸಲಾಗುವುದು ಎಂದರು. ಕಾಮಗಾರಿ ಗುತ್ತಿಗೆ ವಹಿಸಿರುವ ಎಲ್ ಅಂಡ್ ಟಿ ಕಂಪನಿ ಗುತ್ತಿಗೆ ಪಡೆದಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ಹೀಗಾಗಿ ನೋಟಿಸ್ ನೀಡಲು ಸೂಚಿಸಿದ್ದು ಕಾಲಮಿತಿಯೊಳಗೆ ಕೆಲಸ ಮುಗಿಸದಿದ್ದರೆ ಬ್ಲಾಕ್ ಲಿಸ್ಟ್​ಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮರೋಪಾದಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ, ಕರೊನಾ ಕಾರಣಕ್ಕೆ ನಾಲ್ಕೈದು ತಿಂಗಳಿನಿಂದ ಕಾಮಗಾರಿಯಲ್ಲಿ ವಿಳಂಬವಾಗಿ ಪೂರ್ಣವಾಗಿ ಮುಗಿಸಲಿಕ್ಕೆ ಸಾಧ್ಯವಾಗಿಲ್ಲ. ಕರೊನಾ ಭಯದ ವಾತಾವರಣದಿಂದಾಗಿ ಕಾರ್ವಿುಕರ ಕೊರತೆ ಉಂಟಾಗಿದೆ. ಪ್ರಸ್ತುತ ಕರೊನಾ ಪ್ರಮಾಣ ಕಡಿಮೆಯಾಗಿದ್ದು, ಹೆಚ್ಚು ಕಾರ್ವಿುಕರನ್ನು ಬಳಸಿಕೊಂಡು ಕಾಮಗಾರಿಗಳಿಗೆ ವೇಗ ನೀಡುವಂತೆ ಸೂಚಿಸಿದ್ದೇನೆ ಎಂದರು. ಎಂಪ್ರೆಸ್ ಸರ್ಕಾರಿ ಕಾಲೇಜು ಕಟ್ಟಡ ನಿಮಾಣ ಸೇರಿ ವಿವಿಧ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕವಾಗಿ ಉದ್ಘಾಟಿಸಲಾಗುವುದು ಎಂದು ಭರವಸೆ ನೀಡಿದರು.

ಉದ್ಯಾನವನಗಳ ಒತ್ತುವರಿ ತೆರವು : ತುಮಕೂರಿನಲ್ಲಿರುವ 520 ಉದ್ಯಾನವನಗಳ ಪೈಕಿ 24 ಒತ್ತುವರಿಯಾಗಿದ್ದು, 12 ಉದ್ಯಾನವನಗಳ ಒತ್ತುವರಿ ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ ಉದ್ಯಾನವನಗಳ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ ಎಂದು ಬೈರತಿ ಬಸವರಾಜು ಭರವಸೆ ನೀಡಿದರು. ಉದ್ಯಾನವನ, ರಾಜಕಾಲುವೆ ಸೇರಿ ಅಮಾನಿಕೆರೆ ಹಿಂಭಾಗದಲ್ಲಿನ ಜಾಗ ಒತ್ತುವರಿಯಾಗಿದೆ, ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ಕಲುಷಿತ ನೀರು ಅಮಾನಿಕೆರೆಗೆ ಸೇರ್ಪಡೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಕಾಂಗ್ರೆಸ್ ಮೊದಲು 113 ಸ್ಥಾನ ಗೆಲ್ಲಲಿ : ಕಾಂಗ್ರೆಸ್ ಮೊದಲು 113 ಸ್ಥಾನದಲ್ಲಿ ಗೆದ್ದು ಆ ನಂತರ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ತೀರ್ವನಿಸಲಿ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನಗರ ಪ್ರದಕ್ಷಿಣೆ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಚುನಾವಣೆಗೆ 2 ವರ್ಷ ಇದೆ. ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ವಿಚಾರ ಭುಗಿಲೆದ್ದಿದೆ. ಆದರೆ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಇಲ್ಲ ಎಂದು ಸ್ವಷ್ಟಪಡಿಸಿದರು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ಸಿಂಗ್ ಪಕ್ಷದಲ್ಲಿನ ಗೊಂದಲ ನಿವಾರಣೆ ಮಾಡಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಿರುಕಿಲ್ಲ. ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುತ್ತೇವೆ. ನಾವೇ ಅಧಿಕಾರಕ್ಕೆ ಬರುತ್ತೆವೆ ಎಂದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಷಯದಲ್ಲಿ ಏರುಪೇರಾಗಿದೆ. ಸತ್ಯಾಂಶ ಹೊರಬರಲಿದ್ದು ಬಳಿಕ ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸಮರ್ಪಕವಾಗಿ ಕಾಮಗಾರಿ ಮುಗಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಮೇಯರ್ ಕೃಷ್ಣಪ್ಪ, ಉಪಮೇಯರ್ ನಾಝಿಮಾ ಬಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಣ್ಣ, ಆಯುಕ್ತೆ ರೇಣುಕಾ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net