ಮಂಡ್ಯಕ್ಕೆ ಅಮಿತ್​ ಶಾ ಬರುವುದಕ್ಕೂ ಚುನಾವಣೆಗೂ ಸಂಬಂಧ ಇಲ್ಲ: ಸಚಿವ ಅಶ್ವತ್ಥನಾರಾಯಣ

amit shah ashwathanarayana
Published on

ಬೆಳಗಾವಿ: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಇಲ್ಲ. ನಿಗದಿತ ಸಮಯದಲ್ಲಿಯೇ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಲಿದೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಬರುವುದಕ್ಕೂ ಚುನಾವಣೆಗೂ ಸಂಬಂಧ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಸುವರ್ಣ ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಕ್ಷಿಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ್ಕೆ ಬರುತ್ತಿದ್ದಾರೆ. ಇದರಿಂದಾಗಿ ಮಂಡ್ಯ ಭಾಗದಲ್ಲಿ ಬೂತ್​ಮಟ್ಟದ ಸಮಾವೇಶಗಳನ್ನು ನಡೆಯಲಿವೆ. ಒಟ್ಟಿನಲ್ಲಿ ಅಮಿತ್​ ಶಾ ಆಗಮನದಿಂದ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ ಎಂದರು.

ಮಂಡ್ಯ ಅಭಿವೃದ್ಧಿಗೆ ಬಿಜೆಪಿ ಬದ್ಧ: ಹಲವು ದಶಕಗಳಿಂದ ಜೆಡಿಎಸ್, ಕಾಂಗ್ರೆಸ್​ನವರು ಮಂಡ್ಯ ಭಾಗದಲ್ಲಿ ಅಧಿಕಾರ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯ. ಕೃಷಿ ಸರಿದಂತೆ ವಿವಿಧ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ ಮಂಡ್ಯ ಜಿಲ್ಲೆಯನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಮೈ ಶುಗರ್​ ಸಕ್ಕರೆ ಕಾರ್ಖಾನೆ ಬಂದ್ ಮಾಡಿದ್ದಾರೆ. ಅದನ್ನು ಪುನಃ ಆರಂಭಿಸಲಾಗುತ್ತಿದೆ. ಮಂಡ್ಯ ಭಾಗದಲ್ಲಿ ವಿಶ್ವವಿದ್ಯಾಲಯ, ಕೈಗಾರಿಕೆಗಳನ್ನು ಆರಂಭಿಸಲಾಗುವುದು. ಕಾಂಗ್ರೆಸ್, ಜೆಡಿಎಸ್​ನವರು ನಂಬಿ ಜನರು ಕೆಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ: ಎಲ್ಲ ವರ್ಗ, ಜನಾಂಗ ಸರ್ವಾಂಗೀಣ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ನ್ಯಾಯ ಕೂಡಿಸುವ ಕೆಲಸವನ್ನೂ ಬಿಜೆಪಿ ಮಾಡುತ್ತಿದೆ. ಕುಟುಂಬಕ್ಕೆ ಸೀಮಿತವಾದ ಸರ್ಕಾರವಲ್ಲ ಎಂದು ಸಚಿವ ಅಶ್ವತ್ಥನಾರಾಯಣ​ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕೋವಿಡ್ ನಿರ್ವಹಣೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ‌ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಸಚಿವರ ನಡುವೆ ಸಮನ್ವಯ ಕೊರತೆ ಇಲ್ಲ.

|ಡಾ.ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net