

ಶಿವಮೊಗ್ಗ: ಸಚಿವ ಅಶ್ವತ್ಥನಾರಾಯಣ್ ಮಾನಸಿಕ ಅಸ್ವಸ್ಥರಾಗಿದ್ದು ಸಿದ್ದರಾಮಯ್ಯ ಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿ ಗುರುವಾರ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಹಿಂದುಳಿದ ವರ್ಗಗಳ ಕಾಂಗ್ರೆಸ್ ಕಾರ್ಯಕರ್ತರು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಿದ್ದರಾಮಯ್ಯ ಈ ನಾಡು ಕಂಡ ಅಪ್ರತಿಮ ಹಿಂದುಳಿದ ವರ್ಗಗಳ ನಾಯಕ. ಅವರನ್ನು ಹತ್ಯೆ ಮಾಡಬೇಕೆಂದು ಬಹಿರಂಗ ಹೇಳಿಕೆ ನೀಡಿರುವುದು ಖಂಡನೀಯ. ಸಚಿವರು ಇತ್ತೀಚಿನ ದಿನಗಳಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಪ್ರಸ್ತುತ ಬಿಜೆಪಿಯ ದಮನಕಾರಿ ರಾಜಕಾರಣವನ್ನು ವಿರೋಧಿಸುತ್ತಾ, ಧ್ವನಿಯಿಲ್ಲದ ಸಮುದಾಯಗಳ ಅಗ್ರಮಾನ್ಯ ನಾಯಕರಾಗಿ ರಾಜ್ಯ ರಾಜಕಾರಣದಲ್ಲಿ ವಿಜೃಂಭಿಸುತ್ತಿದ್ದಾರೆ. ಅದನ್ನು ಸಹಿಸದೇ ಬೇಜಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರಮೇಶ್ ಇಕ್ಕೇರಿ, ನಗರ ಅಧ್ಯಕ್ಷ ಮೋಹನ್, ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಯುವ ಕಾಂಗ್ರೆಸ್ ನಗರದ ಅಧ್ಯಕ್ಷ ವಿನಯ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಮಧು ಕುಮಾರ್, ಮುಖಂಡರಾದ ಶರತ್, ವಿನಯ್, ಪ್ರದೀಪ್, ಅರುಣ್, ಪ್ರಮೋದ, ರಾಜೇಶ್, ಗಿರೀಶ, ಸಂದೀಪ್, ಭರತ್, ಧನಂಜಯ್, ದರ್ಶನ್, ಸಚಿನ್ ಮತ್ತಿತರರಿದ್ದರು.