ಮಂಡ್ಯದಲ್ಲಿ ಇನ್ನಷ್ಟು ಕ್ಷೇತ್ರದಲ್ಲಿ ಬಿಜೆಪಿ ಗೆಲುವು: ಕಂದಾಯ ಸಚಿವ ಆರ್.ಅಶೋಕ್ ವಿಶ್ವಾಸ

01_11_Mdy_06(R.Ashok)
Published on
ಮಂಡ್ಯ: ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಮತಷ್ಟು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಅಂತೆಯೇ ಮಂಡ್ಯ ಜಿಲ್ಲೆಯಲ್ಲಿ ಇನ್ನಷ್ಟು ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದ ಶಾಸಕರ ಬಳಿ ಮಾತನಾಡಿದ್ದೇವೆ. ಬಿಜೆಪಿಗೆ ಬರುವಂತವರ ಸಂಖ್ಯೆ ಹೆಚ್ಚಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ಅತಂತ್ರ ಸರ್ಕಾರ ಇನ್ನೂ ಯಾವತ್ತು ಬರಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಅತಂತ್ರ ಸರ್ಕಾರ ಮಾಡಿದರು. ಅತಂತ್ರ ಸರ್ಕಾರದ ಸ್ಥಿತಿ ಬಗ್ಗೆ ಜನರಿಗೆ ಗೊತ್ತಿದೆ. 2006ರಲ್ಲಿ ಬಿಜೆಪಿ ಸರ್ಕಾರ ಮಾಡಲಾಗಿತ್ತು. ಮೋಸ ಮಾಡಿ ಸರ್ಕಾರ ಬೀಳಿಸಿದರು. ಮತ್ತೆ ಕಾಂಗ್ರೆಸ್ ಹತೆ ಸರ್ಕಾರ ರಚನೆ ಮಾಡಿದರೂ ಅದು ಉಳಿಯಲಿಲ್ಲ. ಆದ್ದರಿಂದ ಈ ಸಲ ಜನರು ಸ್ಪಷ್ಟವಾದ ಬಹುಮತ ನೀಡುತಾರೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದರು.
ಇನ್ನು ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಕುರಿತು ವ್ಯಂಗ್ಯವಾಡಿದ ಅಶೋಕ್, ಜೆಡಿಎಸ್‌ನ ರಥಯಾತ್ರೆ ವರ್ಕೌಟ್ ಆಗುವುದಿಲ್ಲ. ಜನ ಬುದ್ದಿವಂತರಾಗಿದ್ದಾರೆ. ಚುನಾವಣಾ ಗಿಮಿಕ್‌ಗಾಗಿ ಈ ತರಹದ ರಥಯಾತ್ರೆಗಳು ಆಗುತ್ತಿವೆ ಅಷ್ಟೇ. ಈ ಯಾತ್ರೆಗಳಿಂದ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಕಾಂಗ್ರೆಸ್‌ನ ಜೋಡೋ ಯಾತ್ರೆನೂ ಅಷ್ಟೇ ಪ್ರಯೋಜನಕ್ಕೆ ಬರಲ್ಲ. ದೇಶದಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ಪೆನಾಯಿಲ್ ಹಾಕಿ ತೊಳೆದುಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಟೀ ಸವಿದ ಸಚಿವ ಆರ್.ಅಶೋಕ್: ನಗರದ ಮಹಾವೀರ ವೃತ್ತದಲ್ಲಿ ಶ್ರೀರಂಗಪಟ್ಟಣದ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಸಚಿವ ಆರ್.ಅಶೋಕ್ ಟೀ ಸವಿದರು. ಈ ವೇಳೆ ಮಾತನಾಡಿದ ಸಚಿವರು, ಮುಂದಿನ ದಿನದಲ್ಲಿ ಮಂಡ್ಯದ 7 ಕ್ಷೇತ್ರಗಳಲ್ಲಿಯೂ ಕಮಲ ಅರಳುತ್ತೆಂಬ ವಿಶ್ವಾಸವಿದೆ. ಮುಂಬರುವ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ನಮ್ಮದೆ ಜಯಭೇರಿ. ಪ್ರಚಂಡ ಬಹುಮತದಿಂದ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದರು.
ಇಂಡುವಾಳು ಸಚ್ಚಿದಾನಂದ ಶೀಘ್ರದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಿ ಪಕ್ಷ ಸೇರಲಿದ್ದಾರೆ. ಆ ಸಮಾರಂಭದಲ್ಲಿ ನಾನು ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಮಾತ್ರವಲ್ಲದೆ ಮಂಡ್ಯದಲ್ಲಿ ಇನಷ್ಟು ಜನ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಕೆ.ಸಿ.ನಾರಾಯಣಗೌಡ ಅವರು ಖಾತೆ ತೆರೆದಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಕ್ಷೇತ್ರದಲ್ಲಿ ಕಮಲ ಅರಳಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net