

ತುಮಕೂರು: ಸಿದ್ಧಗಂಗಾ ಮಠದ ಸೇವೆ ದೇಶಕ್ಕೆ ಮಾದರಿಯಾಗಿದ್ದು, ಇಲ್ಲಿನ ಮಕ್ಕಳಲ್ಲಿರುವ ಶಿಸ್ತು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಸಚಿವ ಆನಂದ್‌ಸಿಂಗ್ ಹೇಳಿದರು.
ಸಿದ್ಧಗಂಗಾ ಮಠದಲ್ಲಿ ಬುಧವಾರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಹೈದ್ರಾಬಾದ್ ಕರ್ನಾಟಕದಲ್ಲಿ ಇರುವ ಬಡತನ ಹಾಗೂ ಬರದ ಭಾರವನ್ನು ಸಿದ್ಧಗಂಗೆ ತೆಗೆದುಕೊಂಡು ಅಲ್ಲಿನ ಮಕ್ಕಳ ಭವಿಷ್ಯ ರೂಪಿಸುತ್ತಿದೆ ಎಂದು ಸ್ಮರಿಸಿದರು. ಗ್ರಾಮೀಣ ಜನರಲ್ಲಿ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಜಾತ್ರೆಯಂತಹ ಸಂದರ್ಭ ಬಳಸಿಕೊಂಡಿರುವುದು ಪ್ರಶಂಸ್ಸನಾರ್ಹ. ಸದಾ ಕೃಷಿ, ಜನ, ಜಾನುವಾರುಗಳ ಬಗ್ಗೆ ಚಿಂತಿಸಿದ್ದ ಶಿವಕುಮಾರ ಸ್ವಾಮೀಜಿ ಅವರ ದೂರದೃಷ್ಟಿಗೆ ಸಾಕ್ಷಿ ಎಂದರು.
ಅರಣ್ಯ ಇಲಾಖೆ ಸಚಿವನಾಗಿದ್ದರಿಂದಲೇ ನನಗೆ ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಸಿಕ್ಕಿದೆ. ಅದಕ್ಕೆ ವಸ್ತು ಪ್ರದರ್ಶನದಲ್ಲಿ ಅರಣ್ಯ ಇಲಾಖೆ ನೀಡಿರುವ ಕೊಡುಗೆ ಕಾರಣ ಎಂದರು. ಪ್ರಸ್ತುತ ಸಮಾಜ ತಂತ್ರಜ್ಞಾನದ ಹಿಂದೆ ಬಿದ್ದು ಸಂತೋಷ ಮರೆತಿದ್ದೇವೆ, ತಂತ್ರಜ್ಞಾನ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ, ತಂತ್ರಜ್ಞಾನದ ಹಿಂದೆ ಓಡುತ್ತ ಪರಿಸರ ಕಳೆದುಕೊಂಡರೆ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತೇವೆ ಎಂದರು. ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ರಾಜ್ಯದ ರೈತರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದರು, ಕೃಷಿಯಲ್ಲಿನ ತಳಿಗಳ ಬಗ್ಗೆ ತಿಳಿಸಲು ಬಯಸಿದ್ದರು ಅದಕ್ಕಾಗಿ ಈ ವಸ್ತು ಪ್ರದರ್ಶನ ಪ್ರಾರಂಭಿಸಿದ್ದರು ಎಂದರು. ಮುಂಬರುವ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಐಟಿ, ಬಿಟಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡುವಂತಾಗಬೇಕು, ಹಳ್ಳಿಗಾಡಿನ ಪೋಷಕರಿಗೆ ಪ್ರೇರೇಪಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಸಿದ್ಧಗಂಗಾ ಮಠ ಗುರುಕುಲವಲ್ಲ, ಎಲ್ಲರಿಗೂ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವ ಕೇಂದ್ರವಾಗುವ ನಿಟ್ಟಿನಲ್ಲಿ ಶ್ರೀಗಳು ಮುಂದಾಲೋಚನೆಯಿಂದ ವಸ್ತು ಪ್ರದರ್ಶನಕ್ಕೆ ಶಾಶ್ವತವಾಗಿ ಜಾಗ ಮೀಸಲಿಟ್ಟಿದ್ದರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಿದ್ಧಗಂಗೆಯಲ್ಲಿ ಪ್ರಾರಂಭಿಸಿದ ವಸ್ತು ಪ್ರದರ್ಶನವನ್ನು ಸುತ್ತೂರು ಮಠ ಸೇರಿ ಅನೇಕ ಮಠಗಳು ಅಳವಡಿಸಿಕೊಂಡವು, ಸರ್ಕಾರವು ಇಂತಹ ವಸ್ತು ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದ್ದು, ಸಿದ್ಧಗಂಗಾ ವಸ್ತು ಪ್ರದರ್ಶನವನ್ನು ವೈಜ್ಞಾನಿಕವಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಮತ್ತು ಕೈಗಾರಿಕೆ ಎರಡರಲ್ಲಿ ಕೃಷಿಯೇ ಮುಖ್ಯ, ಕೈಗಾರಿಕೆ ಇಲ್ಲದೇ ಬದುಕ ಬಹುದು ಆದರೆ ಕೃಷಿ ಇಲ್ಲದೇ ಬದಕಲು ಸಾಧ್ಯವಿಲ್ಲ, ವಿಜ್ಞಾನ, ತಂತ್ರಜ್ಞಾನವನ್ನು ಬಿಟ್ಟು ಕೃಷಿಗೆ ಒತ್ತು ನೀಡಬೇಕು, ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಕೃಷಿಗೆ ಮರಳಬೇಕಿರುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ತಾಪಂ ಸದಸ್ಯೆ ಮಮತಾ, ಮೈದಾಳ ಗ್ರಾಪಂ ಅಧ್ಯಕ್ಷೆ ಜಲಜಾಕ್ಷಿ, ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಪ್ರದರ್ಶನದ ಕಾರ್ಯದರ್ಶಿ ಜಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಕೆಂ.ಬ.ರೇಣುಕಯ್ಯ, ಎಸ್.ಶಿವಕುಮಾರ್, ಪ್ರಚಾರ ಸಮಿತಿ ಸಂಚಾಲಕ ಜಿ.ರುದ್ರೇಶಯ್ಯ,
ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಎಸ್. ಉಮಾಮಹೇಶ್, ಸಹ ಸಂಚಾಲಕ ಎಂ.ನಂದೀಶ್ ಇದ್ದರು.
ಕರ್ನಾಟಕದ ಬೃಹತ್ ವಸ್ತು ಪ್ರದರ್ಶನ ಸಿದ್ಧಗಂಗಾ ಮಠದ ಹೆಮ್ಮೆ, ಶ್ರೀಮಠದ ಅನೇಕ ಸೇವಾ ಕಾರ್ಯಗಳಲ್ಲಿ ವಸ್ತು ಪ್ರದರ್ಶನ ಕೂಡ ಒಂದು, ಶಿವಕುಮಾರಸ್ವಾಮೀಜಿ ಅವರಿಗೆ ಕೃಷಿ ಬಗ್ಗೆ ಅಪಾರ ಆಸಕ್ತಿ ಇತ್ತು ಅದಕ್ಕಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಎಂದು ಹೆಸರಿಟ್ಟಿದ್ದರು.
ಶ್ರೀಸಿದ್ದಲಿಂಗಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷರು