

ಸವದತ್ತಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ದಲಿತ ಸಂಟನೆ ವತಿಯಿಂದ ನಗರದ ಎಪಿಎಂಸಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಎನ್.ಹೆಗ್ಗನ್ನವರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ವೃತ್ತದಲ್ಲಿ ಟಯರ್ಗೆ ಬೆಂಕಿ ಹಚ್ಚಿ, ಅಮಿತ್ ಷಾ ಅವರ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸರ್ವ ಜನಾಂಗದವರು ಸಮಾನತೆ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸಲೆಂಬ ಸದುದ್ದೇಶದಿಂದ ಅಂಬೇಡ್ಕರ್ ಸಂವಿಧಾನದ ಮೂಲಕ ಮಾದರಿ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ, ಸಂಸತ್ತಿನಲ್ಲಿ ಅಂಬೇಡ್ಕರ್ ಅವರ ಕುರಿತಾದ ಕೇಂದ್ರ ಗೃಹ ಅಮಿತ್ ಷಾ ಅವರ ಹೇಳಿಕೆ ಖಂಡನೀಯ. ಅವರು ಕೇವಲ ಅಂಬೇಡ್ಕರ್ ಅವರನ್ನು ಮಾತ್ರ ಅವಮಾನಿಸಿಲ್ಲ. ಎಲ್ಲ ಭಾರತೀಯರನ್ನು ಅವಮಾನಿಸಿದ್ದಾರೆ.ಅಂಬೇಡ್ಕರ್ ಅವಮಾನಿಸಿದ ಅಮಿತ್ ಷಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಮುಖಂಡ ಯಲ್ಲಪ್ಪ ಗೊರವನಕೊಳ್ಳ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚಿಸದಿದ್ದರೆ ಅಮಿತ್ ಷಾ ಕೇಂದ್ರದ ಗೃಹ ಸಚಿವರಾಗುತ್ತಿರಲಿಲ್ಲ. ಪಾತೀತವಾಗಿ ಎಲ್ಲರೂ ಅಮಿತ್ ಷಾ ನಡೆ ವಿರೋಧಿಸಬೇಕಿದೆ ಎಂದರು.
ಎಪಿಎಂಸಿ ವೃತ್ತದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಎಲ್.ಎಸ್.ನಾಯಕ, ಬಸವರಾಜ ತಳವಾರ, ರವಿ ದೊಡ್ಡಮನಿ, ರುದ್ರಪ್ಪ ಚಲವಾದಿ, ಎಂ.ಎನ್.ಮುತ್ತಿನ, ಶಿವು ಅಮಾತೆನ್ನವರ, ಬಾಪು ಚೂರಿಖಾನ, ಮಂಜುನಾಥ ಪಾಚಂಗಿ, ಮೌಲಾಸಾಬ ತಬ್ಬಲಜಿ, ಬಸವರಾಜ ಅರಮನಿ, ಮಹೇಶ ಬೆಲೀಪ್, ವೈ. ಸಿ.ಕಲ್ಲಮ್ಮನವರ, ರಾವೇಂದ್ರ ಪೂಜೇರ, ಮಹಾದೇವ ಕಿಚಡಿ, ಜಗದೀಶ ಶಿರಸಂಗಿ, ಮಹಾದೇವ ಬಡ್ಲಿ, ಪ್ರಕಾಶ ಮುಳ್ಳೂರ, ಮಾರುತಿ ಹಿರೇಕೆಂಚನ್ನನವರ, ರಾಜು ಭಾವಾಖಾನ ಇತರರಿದ್ದರು.