

ಮಡಿಕೇರಿ:
ಕರ್ನಾಟಕದಲ್ಲಿ ತಲಾದಾಯ ಹೆಚ್ಚುವುದಕ್ಕೆ ಗ್ಯಾರಂಟಿ ಯೋಜನೆ ಕಾರಣ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಮಡಿಕೇರಿಯಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು
ದೇಶದಲ್ಲಿ ತಲಾದಾಯದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿ ಇದೆ. ಇದು ಕೇಂದ್ರ ಸರ್ಕಾರವೇ ನೀಡಿರುವ ವರದಿ. ಇದುವರೆಗೆ ರಾಜ್ಯದಲ್ಲಿ 4.5 ಕೋಟಿ ಜನರ ಖಾತೆಗೆ ಒಂದು ಲಕ್ಷ ಕೋಟಿ ರೂ. ಹಾಕಿದ್ದೇವೆ. ಯಾವುದೇ ಕಚೇರಿಗೆ ಅಲೆಯದೆ, ಒಂದು ರೂಪಾಯಿ ಕಮಿಷನ್ ಕೊಡದೆ ಒಬ್ಬರ ಮನೆ ಕಾಯದೆ ಜನರಿಗೆ ಹಣ ಹಾಕಿದ್ದೇವೆ. ಜನರು ಒಂದು ಲಕ್ಷ ಕೋಟಿ ರೂಪಾಯಿ ಪಡೆದಿದ್ದಾರೆ. ಇದು ವಿಶ್ವದಲ್ಲೇ ಮಾದರಿಯಾಗಿದೆ. ಎಲ್ಲರನ್ನೂ ಒಳಗೊಂಡು ಅಭಿವೃದ್ಧಿ ಮಾಡುವುದು ಹೇಗೆ ಎಂದು ತೋರಿಸಿದ್ದೇವೆ. ದೇಶದ ಸಂಪತ್ತಿನಲ್ಲಿ ಬಡವರಿಗೆ ಭಾಗ ಇದೆ ಎಂದು ಜನರನ್ನು ಭಾಗಸ್ಥರನ್ನಾಗಿ ಮಾಡಿದ್ದೇವೆ. ಎಲ್ಲರನ್ನೂ ಒಳಗೊಂಡು ಬೆಳವಣಿಗೆ ಆಗುವುದು ಹೇಗೆ ಎಂದು ತೋರಿಸಿದ್ದೇವೆ. ಆಸ್ತಿಯೆಲ್ಲಾ ಬರೀ ಶ್ರೀಮಂತರಿಗೆ ಹೋಗುವುದಲ್ಲ.
ದೇಶದ ಆದಾಯದಲ್ಲಿ ದುಡಿಯುವ ವರ್ಗಕ್ಕೂ ಒಂದು ಪಾಲು ಇದೆ. ಅದನ್ನು ಹೇಗೆ ಮಾಡುವುದು ಎಂದು ತೋರಿಸಿದ್ದೇವೆ. ಹೀಗಾಗಿ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ ಒನ್ ಆಗಿದೆ. ಇವರೆಲ್ಲಾ ಟೀಕೆ ಮಾಡ್ತಾ ಇದ್ದರು ಇವರ ಬಾಯಲ್ಲಿ ಉಸಿರಿಲ್ಲ. ಬಡವರಿಗೆ ಆದಾಯದ ಪಾಲು ಸಿಗುತ್ತದೆ ಎಂಬ ಅಸೂಯೆ ಬಿಜೆಪಿಯವರಿಗಿತ್ತು.
ದೇಶದ ಸಂಪತ್ತಿನಲ್ಲಿ ಬಡವರಿಗೆ ಒಂದು ಪಾಲು ಸಿಗುತ್ತದೆ ಎನ್ನುವುದನ್ನು ಸಹಿಸಿರಲಿಲ್ಲ. ಹೀಗಾಗಿ ಇಷ್ಟು ದಿನ ಗ್ಯಾರಂಟಿಯನ್ನು ಟೀಕೆ ಮಾಡ್ತಾ ಇದ್ದರು. ಬಡವರಿಗೂ ಪಾಲು ಕೊಟ್ಠಿದ್ದರಿಂದ ಕರ್ನಾಟಕ ನಂಬರ್ ಒನ್ ಆಗಿದೆ.
ಬಿಜೆಪಿಯವರ ಪ್ರಕಾರ ದೇಶದ ಆದಾಯದ ಪಾಲು ಶ್ರೀಮಂತರಿಗೆ ಮಾತ್ರ ಹೋಗಬೇಕು. ದುಡಿಯುವ ವರ್ಗಕ್ಕೆ ಏನೂ ಹೋಗಬಾರದು ಎನ್ನುವುದು ಬಿಜೆಪಿಯದ್ದು. ಬಡವರಿಗೆ ಪಾಲು ಕೊಟ್ಟರೆ ಅವರಿಗೆ ಸಹಿಸಲು ಆಗದಷ್ಟು ಹೊಟ್ಟೆಉರಿ. ಅದಕ್ಕಾಗಿ ಏನೆಲ್ಲಾ ಟೀಕೆ ಮಾಡಿದ್ದಾರೆ ಎನ್ನುವುದು ಗೊತ್ತೇ ಇದೆ ಎಂದು ಹೇಳಿದರು.