

ಕುಶಾಲನಗರ: ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಕಾರ್ಯಕರ್ತರ ಅಪಾರ ಶ್ರಮ ಅಡಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಹೇಳಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕೃತಜ್ಞತೆ ಸಮರ್ಪಣಾ ಸಭೆಯಲ್ಲಿ ಮಾತನಾಡಿದ ಅವರು, ಜನರು ನೀಡಿದ ಅವಕಾಶ ಬಳಸಿಕೊಂಡು ನಾವು ಪಕ್ಷವನ್ನೂ ಬೆಳೆಸಬೇಕು ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲಲು ಪಣ ತೊಡಲಾಗಿದೆ. ಇದಕ್ಕೆ ಕಾರ್ಯಕರ್ತರು ಸಹಕಾರ ನೀಡಬೇಕು ಎಂದರು.
ಕೊಡಗಿನಿಂದ ಹೆಚ್ಚಿನ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. 28 ಬಾರಿ ಕರ್ನಾಟಕದಲ್ಲಿ ಪ್ರಚಾರ ಸಭೆಗಳನ್ನು ನಡೆಸಿದ ಪ್ರಧಾನಿ ಮೋದಿ ಮತ್ತು ಚಾಣಾಕ್ಷ ಅಮಿತ್ ಶಾ ಅವರ ಪ್ರಭಾವ ಒಂದಷ್ಟೂ ಫಲ ನೀಡಲಿಲ್ಲ. ಮೋದಿ ವಿರುದ್ಧ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಒಂದಾಗಿ ಲೋಕಸಭೆ ಚುನಾವಣೆ ಎದುರಿಸಬೇಕಿದೆ ಎಂದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕಾಡಾನೆ ಹಾವಳಿ, ತೋಟಗಳಲ್ಲಿನ ಲೈನ್‌ಮನೆ ವಾಸಿಗಳ ಸಮಸ್ಯೆ, ಭೂಮಿ ದಾಖಲೆ ಸರಿಪಡಿಸುವುದು, ಅರಣ್ಯ ಹಕ್ಕು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಗುವುದು. ಹೌಸಿಂಗ್ ಫಾರ್ ಆಲ್ ಯೋಜನೆಗಾಗಿ ಅಂದಾಜು 5 ಸಾವಿರ ಅರ್ಜಿ ಸಲ್ಲಿಕೆಯಾಗಿವೆೆ. ಇದನ್ನು ಸೂಕ್ತವಾಗಿ ಪರಿಶೀಲಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಕುಶಾಲನಗರ ಕೆಎಸ್ ಆರ್ ಟಿಸಿ ಬಸ್ ಡಿಪೋ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ 8 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ತಾಲೂಕು ಕಚೇರಿಗೆ ಸಂಬಂಧಿಸಿದ ಕಡತಗಳನ್ನು ಸೋಮಾವಾರಪೇಟೆಯಿಂದ ಕುಶಾಲನಗರಕ್ಕೆ ವರ್ಗಾಯಿಸಲು ಸೂಚಿಸಬೇಕೆಂದು ಸಚಿವರಿಗೆ ಕೋರಿಕೆ ಸಲ್ಲಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ನಟೇಶ್ ಗೌಡ, ಟಿ.ಪಿ.ಹಮೀದ್, ದಿನೇಶ್, ಖಲೀಮುಲ್ಲಾ, ಕಿರಣ್, ಜೋಸೆಫ್ ವಿಕ್ಟರ್ ಸೋನ್ಸ್, ಸುನಿತಾ, ಪ್ರಕಾಶ್, ನವೀನ್ ಮತ್ತಿತರರು ಹಾಜರಿದ್ದರು.