

ಕೊಪ್ಪಳ: ದೇಶದಲ್ಲಿ ಎಲ್ಲರಿಗೂ ಸಮಾನತೆ ಸಿಗುವವರೆಗೆ ಮೀಸಲಾತಿ ತೆಗೆಯುವುದಿಲ್ಲ. ಬಂದ ನಂತರ ತೆಗೆಯುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕನ್ನಡ ಮತ್ತು ಸಂಸತಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಮರ್ಥಿಸಿಕೊಂಡರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಗಾ ಹೇಳಿದ್ದರಲ್ಲಿ ತಪ್ಪೇನಿದೆ ? ಕಾಂಗ್ರೆಸ್ ಯಾವಾಗಲೂ ದಲಿತರ ಪರ ಇದೆ. ರಾಜ್ಯದಲ್ಲಿ ಎಸ್ಸಿ&ಎಸ್ಟಿಗಳಿಗಾಗಿ ವಿಶೇಷ ಯೋಜನೆ ರೂಪಿಸಿದ್ದು, ಕಾಯ್ದೆ ಮಾಡಿ ಜಾರಿ ಮಾಡಿದ್ದು ಸಿಎಂ ಸಿದ್ದರಾಮಯ್ಯ. ಕೇಂದ್ರ ಸರ್ಕಾರಕ್ಕೆ ಅಷ್ಟೊಂದು ಕಾಳಜಿ ಇದ್ದರೆ ಮೀಸಲಾತಿ ಪ್ರಮಾಣ ಶೇ.75ಕ್ಕೆ ಹೆಚ್ಚಿಸುವ ಕೆಲಸ ಮಾಡಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದಲ್ಲವೆಂದು ತಿರುಗೇಟು ನೀಡಿದರು.
ನಾಗಮಂಗಲ ಗಲಭೆ ಬಗ್ಗೆ ಮಾತನಾಡಿ, ಬಿಜೆಪಿಯವರೇ ಗಲಭೆಗೆ ಕಾರಣ. ಅಲ್ಲಿಗೆ ಭೇಟಿ ನೀಡಿದ ಕೇಂದ್ರ ಸಚಿವ ಕುಮಾರ ಸ್ವಾಮಿ ಎಲ್ಲ ಸಮುದಾಯದವರನ್ನು ಕರೆದು ಸಭೆ ಮಾಡಿ ಶಾಂತಿ ನೆಲೆಸುವಂತೆ ಮಾಡಬೇಕಿತ್ತು. ಅದನ್ನು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಯಿಂದ ಅಶಾಂತಿ ಸೃಷ್ಟಿಯಾಗಿದೆ. ಭದ್ರತೆ ದೃಷ್ಟಿಯಿಂದ ಗಣೇಶ ಮೂರ್ತಿ ಪೊಲೀಸ್ ವಾಹನದಲ್ಲಿ ಇಟ್ಟಿದ್ದಾರೆ. ಅದಕ್ಕೆ ದೇವರನ್ನೇ ಬಂಧಿಸಿದ್ದಾರೆ ಎಂದರೆ ಅರ್ಥವಿಲ್ಲವೆಂದರು.
ಶಾಸಕ ಮುನಿರತ್ನ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ರಾಜ್ಯವೇ ಅವರು ಆಡಿದ್ ಮಾತನ್ನು ಕೇಳಿಸಿಕೊಂಡಿದೆ. ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ. ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ವಿಠಲಾಪುರಕ್ಕೆ ನಾನು ಭೇಟಿ ನೀಡುತ್ತಿರುವೆ. ಡಿಸಿ ಮತ್ತು ಎಸ್ಪಿಗೆ ಸೂಚಿಸಿದ್ದು ಎಲ್ಲ ದಲಿತಪರ ಸಂಟನೆಗಳ ಸಭೆ ಕರೆದು ಶಾಂತಿ ಕಾಪಾಡುವ ಕೆಲಸ ಮಾಡಲು ತಿಳಿಸಿರುವೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯ ಮತ್ತೆ ಭರ್ತಿ ಆಗಿದೆ. ಸಿಎಂ, ಡಿಸಿಎಂ ಅವರನ್ನು ಕರೆಸಿ ಬಾಗಿನ ಅರ್ಪಿಸಲು ಆಗಮಿಸಲಿದ್ದಾರೆ. ಗೇಟ್ ಕಿತ್ತ ಟನೆ ಕುರಿತು ತನಿಖಾ ತಂಡ ನೇಮಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು. ಬಾಗಿನ ಅರ್ಪಣೆಗೆ ದಿನಾಂಕ ನಿಗದಿ ಮಾಡಿ ತಿಳಿಸುತ್ತೇವೆ ಎಂದರು.