ಲಾಕ್‌ಡೌನ್‌ನಿಂದ ಗಣಿಗಾರಿಕೆ ಸ್ತಬ್ಧ, ಕೂಲಿ ಕಾರ್ಮಿಕರಿಲ್ಲದೆ ಸದ್ದಡಗಿದ ಡೈನಾಮೈಟ್

karr
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರು ಊರುಗಳಿಗೆ ತೆರಳಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ಸ್ತಬ್ಧಗೊಂಡಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ಖೋತಾ ಆಗಿದೆ.

ಜಿಲ್ಲೆಯ 67 ಬಿಲ್ಡಿಂಗ್ ಸ್ಟೋನ್, 39 ಗ್ರಾೃನೈಟ್ ಹಾಗೂ 31 ಕ್ರಷರ್‌ಗಳು ಸ್ತಬ್ಧವಾಗಿರುವುದರಿಂದ ಸಾವಿರಾರು ಲಾರಿಗಳ ಓಡಾಟ ನಿಂತಿದ್ದು, ಜಲ್ಲಿ, ಎಂ.ಸ್ಯಾಂಡ್ ಸಾಗಿಸುತ್ತಿದ್ದ ನೂರಾರು ಲಾರಿ ಚಾಲಕರು, ಕ್ಲೀನರ್‌ಗಳು ಸಂಕಷ್ಟ ಎದುರಿಸುವಂತಾಗಿದೆ.

ಸರ್ಕಾರದ ನಿಗಾದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಒಂದೆಡೆಯಾದರೆ, ಅನಧಿಕೃವಾಗಿ ನಡೆಯುತ್ತಿದ್ದ ಸಣ್ಣಪುಟ್ಟ ಗಣಿಗಾರಿಕೆಗಳೂ ಬಂದ್ ಆಗಿವೆೆ. ಗೋಮಾಳ ಹಾಗೂ ಕೆರೆಯಂಗಳದಲ್ಲಿ ಮಣ್ಣು ತೆಗೆಯುತ್ತಿದ್ದ ಕೆಲಸಕ್ಕೂ ಬ್ರೇಕ್ ಬಿದ್ದಿದೆ. ಒಂದು ರೀತಿಯಲ್ಲಿ ಅಕ್ರಮ ಗಣಿಗಾರಿಕೆಗೆ ಪರೋಕ್ಷವಾಗಿ ಲಾಕ್‌ಡೌನ್ ಬ್ರೇಕ್ ಹಾಕಿದ್ದರೆ, ಇದನ್ನೇ ನಂಬಿಕೊಂಡಿದ್ದ ನೂರಾರು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ.

ಜಲ್ಲಿ, ಎಂ.ಸ್ಯಾಂಡ್‌ಗೆ ಡಿಮಾಂಡ್: ಜಿಲ್ಲೆಯಲ್ಲಿ ಕಟ್ಟಡ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಅಪೂರ್ಣಗೊಂಡ ಕಾಮಗಾರಿ ಪೂರ್ಣಗೊಳಿಸಲು ಪರದಾಡುವಂತಾಗಿದೆ. ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳಿಗೂ ಕಚ್ಚಾ ಸಾಮಗ್ರಿಗಳಿಲ್ಲದೆ ಸಂಕಷ್ಟ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಕ್ವಾರಂಟೈನ್ ಭೀತಿ: ಲಾಕ್‌ಡೌನ್ ಸಡಿಲಿಕೆ ಬಳಿಕ ಸಾಕಷ್ಟು ಕೂಲಿಕಾರ್ಮಿಕರು ಕೆಲಸಕ್ಕೆ ಮರಳಲು ಉತ್ಸುಕರಾಗಿದ್ದರೂ ಕ್ವಾರಂಟೈನ್ ಭೀತಿಯಿಂದ ಇತ್ತ ಸುಳಿಯುತ್ತಿಲ್ಲ. ಗಣಿ ಮಾಲೀಕರು ಜೂ.1ರ ಬಳಿಕ ಕಾರ್ಮಿಕರನ್ನು ಕರೆತರುವ ಚಿಂತನೆ ನಡೆಸುತ್ತಿದ್ದಾರೆ. ಸ್ಥಳೀಯ ಉಸ್ತುವಾರಿಗಾಗಿ ಬೆರಳೆಣಿಕೆ ಕೆಲಸಗಾರರಿದ್ದರೂ ಗಣಿಗಾರಿಕೆ ಮೊದಲಿನಂತೆ ನಡೆಯಲು ವಲಸೆ ಕಾರ್ಮಿಕರು ಬರಲೇಬೇಕಾಗಿದೆ.

40 ಕೋಟಿ ರೂ.ಆದಾಯ: ಜಿಲ್ಲೆಯಿಂದ ಪ್ರತಿ ವರ್ಷ ಸರಾಸರಿ 40 ಕೋಟಿ ರೂ. ಆದಾಯ ಸರ್ಕಾರದ ಬೊಕ್ಕಸ ಸೇರುತ್ತಿತ್ತು. ಈ ಸಾಲಿನಲ್ಲಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸುಮಾರು 39 ಕೋಟಿ ರೂ. ಆದಾಯ ಪಾವತಿಸುವಲ್ಲಿ ಯಶ ಕಂಡಿದೆ.

ಗಣಿಗಾರಿಕೆಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡಿನ ಕಾರ್ಮಿಕರೇ ಹೆಚ್ಚಿದ್ದರು. ಎಲ್ಲರೂ ಜಾಗ ಖಾಲಿ ಮಾಡಿದ್ದು, ಕೂಲಿಕಾರ್ಮಿಕರಿಲ್ಲದೆ ಗಣಿಗಾರಿಕೆಯೂ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವಂತಾಗಿದೆ. ಸುರೇಶ್, ಉಪನಿರ್ದೇಶಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net