

ತುಮಕೂರು : ಬಳ್ಳಾರಿಯಲ್ಲಿ ಸ್ಕೂಲ್ ಆಫ್ ಮೈನಿಂಗ್ ಆರಂಭಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿದರು.
54 ಎಕರೆ ಪ್ರದೇಶದಲ್ಲಿ ಸ್ಕೂಲ್ ಆಫ್ ಮೈನಿಂಗ್ ಆರಂಭಿಸಲಿದ್ದು, ಈ ಸ್ಕೂಲ್‌ನ ಮುಖ್ಯ ಉದ್ದೇಶ ಗಣಿಗಾರಿಕೆ ನಿರ್ವಹಣೆ. ಮಾಲೀಕರು ಹಾಗೂ ಕಾರ್ಮಿಕರಿಗೆ ವೈಜ್ಞಾನಿಕ ನಿರ್ವಹಣೆಯ ತರಬೇತಿ ನೀಡುವುದಾಗಿದೆ. ಅವೈಜ್ಞಾನಿಕ ಗಣಿಗಾರಿಕೆ ತಡೆಯುವುದರ ಜತೆಗೆ ಕಲ್ಲು, ಮರಳು, ಉಕ್ಕು, ಚಿನ್ನ ಸೇರಿ ಎಲ್ಲ ರೀತಿಯ ಗಣಿಗಾರಿಕೆ ನಡೆಸುವ ಸಂಬಂಧ ತರಬೇತಿ ನೀಡಲಿದ್ದು, ಸದ್ಯದಲ್ಲೇ ಸಚಿವ ಸಂಪುಟ ಅನುಮೋದನೆ ಪಡೆಯಲಾಗುವುದು ಎಂದು ಸೋಮವಾರ ನಗರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದ 4 ಕಂದಾಯ ವಿಭಾಗ ಸೇರಿ ಐದು ಕಡೆ ಗಣಿ ಅದಾಲತ್‌ಗಳನ್ನು ಪ್ರಾರಂಭಿಸಲಿದ್ದೇವೆ. ಇದರಿಂದ ಉದ್ದಿಮೆದಾರರು ಇಲಾಖೆಗೆ ಅರ್ಜಿಗಳನ್ನು ಹಿಡಿದುಕೊಂಡು ಅಲೆಯುವುದು ತಪ್ಪಲಿದೆ. ಗಣಿ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆ ಇತ್ಯರ್ಥ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಏಕಗವಾಕ್ಷಿ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನ ಮಾಡಲಾಗುವುದು. ಕರೊನಾ ಮುಗಿದ ಬಳಿಕ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
6 ಸಾವಿರ ಅರ್ಜಿ: ರಾಜ್ಯದಲ್ಲಿ ಗಣಿಗಾರಿಕೆಗೆ ಸಂಬಂಧಿಸಿ ಬಾಕಿ ಉಳಿದಿರುವ ಅಂದಾಜು 6000 ಅರ್ಜಿಗಳನ್ನು 3 ತಿಂಗಳಲ್ಲಿ ಇತ್ಯರ್ಥಪಡಿಸಲು ವಿಶೇಷ ಗಮನಹರಿಸಲಾಗಿದೆ. 2016ಕ್ಕಿಂತ ಮುಂಚೆ ಅರ್ಜಿ ಸಲ್ಲಿಸಿ ಎನ್‌ಒಸಿ ಪಡೆದವರಿಗೆ ಗಣಿಗಾರಿಕೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಡಿಜಿಎಂಎಸ್ ಲೈಸೆನ್ಸ್ ಪಡೆಯದವರಿಗೆ 90 ದಿನಗಳೊಗೆ ಅರ್ಜಿ ಸಲ್ಲಿಸಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುವುದು. ರಾಜ್ಯದಲ್ಲಿ ಉದ್ದಿಮೆದಾರ ಸ್ನೇಹಿ ವಾತಾವರಣ ನಿರ್ಮಿಸಲು ನಾವು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ.ರೇ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರವಾಡ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಮಹೇಶ್ ಸೇರಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
ರಫ್ತು ನಿರ್ಬಂಧ ತೆರವಿಗೆ ಸುಪ್ರೀಂ ಮೊರೆ : ಅದಿರು ರಫ್ತು ನಿರ್ಬಂಧದಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟವಾಗುತ್ತಿದೆ. ಕಡಿಮೆ ದರದಲ್ಲಿ ಸರಕು ಖರೀದಿಸಿ ಹೆಚ್ಚಿನ ದರದಲ್ಲಿ ಸ್ಟೀಲ್ ಮಾರಾಟ ಮಾಡಲಾಗುತ್ತದೆ. ಇದರಿಂದ ನಮ್ಮಲ್ಲಿ ಕಬ್ಬಿಣದ ಬೆಲೆ ಹೆಚ್ಚಿದೆ. ಹಾಗಾಗಿ, ನಮಗೂ ವಿದೇಶಕ್ಕೆ ಅದಿರು ರಫ್ತು ಮಾಡಲು ಅವಕಾಶ ಕೊಟ್ಟರೆ ಹೆಚ್ಚಿನ ಅನುಕೂಲವಾಗಲಿದೆ. ರಫ್ತು ನಿರ್ಬಂಧ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುರುಗೇಶ್ ನಿರಾಣಿ ತಿಳಿಸಿದರು.
ಗಣಿ ಅಭಿವೃದ್ಧಿ ನಿಧಿಯಿಂದ 3 ವರ್ಷಗಳಲ್ಲಿ ಕೈಗೊಳ್ಳಬಹುದಾದ ಕಾರ್ಯ ಯೋಜನೆಗಳ ಕುರಿತಾಗಿ ನೀಲಿನಕ್ಷೆ ರೂಪಿಸಲಾಗಿದೆ. ರಾಜ್ಯದಲ್ಲಿ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಸುಮಾರು 32 ಕೋಟಿ ಪೈಕಿ 14.56 ಕೋಟಿ ಅನುದಾನ ವಿನಿಯೋಗವಾಗಿದೆ. ಕುಡಿಯುವ ನೀರು ಸರ್ಕಾರಿ ಶಾಲೆಗಳ ದತ್ತು ಪಡೆಯುವುದು, ಸಮುದಾಯ ಭವನ ನಿರ್ಮಾಣ, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿ ಹಲವು ರೀತಿ ಯೋಜನೆಗಳನ್ನು ರೂಪಿಸಬಹುದು. ಈ ಬಗ್ಗೆ ಸಭೆ ಕರೆದು ಜನಪ್ರತಿನಿಧಿಗಳಿಗೆ ಹಂಚಿಕೆ ಮಾಡುವುದಾಗಿ ತಿಳಿಸಿದರು.
ಮಾದರಿ ಮರಳು ನೀತಿ : ದೇಶಕ್ಕೆ ಮಾದರಿ ಮರಳು ನೀತಿಯನ್ನು ಇಲಾಖೆ ಸಿದ್ಧಪಡಿಸಿದೆ. ಬೇರೆ ರಾಜ್ಯದವರು ಕರ್ನಾಟಕವನ್ನು ಮಾದರಿಯಾಗಿಟ್ಟುಕೊಂಡು ಅನುಷ್ಠಾನ ಮಾಡುವಂತಹ ನೀತಿ ಇದಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಹೊಸ ಮರಳು ನೀತಿ ಜಾರಿಗೆ ತರಲಾಗುವುದು. ರಾಜ್ಯದಲ್ಲಿ ಒಟ್ಟು 350 ಮರಳು ಬ್ಲಾಕ್‌ಗಳನ್ನು ನದಿಪಾತ್ರದಲ್ಲಿ ಗುರುತಿಸಲಾಗಿದೆ. ಈಗಿರುವ ಮರಳು ನೀತಿಗೆ ತಿದ್ದುಪಡಿ ಮಾಡಿ ಮರಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ಎ,ಬಿ,ಸಿ ಗ್ರೇಡಿಂಗ್ ಮಾಡುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ ಎಂದು ಸಚಿವರು ಹೇಳಿದರು.
ಗಣಿ ಬಾಧಿತ ಪ್ರದೇಶಗಳಿಗೆ ಪರಿಹಾರ ಹಾಗೂ ಆ ಪ್ರದೇಶಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನ ಸುಪ್ರೀಂಕೋರ್ಟ್‌ನಿಂದ ಬಿಡುಗಡೆಯಾಗಿಲ್ಲ. ತುಮಕೂರು ಜಿಲ್ಲೆಗೆ ಸುಮಾರು 2554 ಕೋಟಿ ರೂ., ಬರಬೇಕಿದೆ. ಆದರೆ, ಕೆಎಂಇಆರ್‌ಸಿಯಿಂದ ಅಂದಾಜು ಒಂದು ಸಾವಿರ ಕೋಟಿ ರೂ., ಹಣ ಬರಬೇಕಿದ್ದು ಇದರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಆರಂಭಿಸುವ ಉದ್ದೇಶ ಇದೆ. ಜಿಲ್ಲೆಯಲ್ಲಿ ಯಾವುದೇ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿಲ್ಲ. ಜೆ.ಸಿ.ಮಾಧುಸ್ವಾಮಿ, ಉಸ್ತುವಾರಿ ಸಚಿವ ಗಣಿ ಬಾಧಿತ ಪ್ರದೇಶಗಳಲ್ಲಿ ಆರೋಗ್ಯ, ಪ್ರವಾಸೋದ್ಯಮ, ಮೂಲಸೌಕರ್ಯ, ರಸ್ತೆ ಸಂಪರ್ಕ, ನೀರಾವರಿ, ಕೌಶಲಾಭಿವೃದ್ಧಿ, ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆಗಾಗಿ ಇಲಾಖೆಯಿಂದ ಮೀಸಲಿಟ್ಟಿರುವ ಅನುದಾನದ ವಿವರ ನೀಡಬೇಕು. ಜಿ.ಎಸ್.ಬಸವರಾಜು ಸಂಸದ ಕೆಆರ್‌ಎಸ್ ಡ್ಯಾಂನಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ. ಡ್ಯಾಂ ಸುತ್ತಮುತ್ತಲಿನ 10 ಕಿ.ಮೀ., ವ್ಯಾಪ್ತಿ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಯಾವ ಆತಂಕವೂ ಡ್ಯಾಂ ಗಿಲ್ಲ. ಮುರುಗೇಶ್ ಆರ್ ನಿರಾಣಿ ಗಣಿ ಸಚಿವ